

ಹೊನ್ನಾವರ: ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆ ಮಾಡಬೇಕು. ಮಹಿಳೆಯರ ಸಬಲೀಕರಣಕ್ಕೆ ಹೊನ್ನಾವರ ರೋಟರಿ ಕ್ಲಬ್ ನೀಡುತ್ತಿರುವ ಕೊಡುಗೆ ಮಹತ್ವವಾದುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಪಟ್ಟಣದ ರೋಟರಿ ಪಾರ್ಕ್ನಲ್ಲಿ ಹೊನ್ನಾವರ ರೋಟರಿ ಕ್ಲಬ್ ವತಿಯಿಂದ ಮಹಿಳೆಯರಿಬ್ಬರಿಗೆ ನೀಡಿದ ಉಚಿತ ಪಿಂಕ್ ಆಟೋ ರಿಕ್ಷಾ ವಿತರಿಸಿ ಅವರು ಮಾತನಾಡಿದರು.
ಫಲಾನುಭವಿಗಳಾದ ಜ್ಯೋತಿ, ಸುಷ್ಮಿತಾ ಅವರಿಗೆ ವಾಹನದ ದಾಖಲೆ ಪತ್ರ ಹಸ್ತಾಂತರಿಸಿ ಶುಭಕೋರಿದರು. ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ಸಾರಂಗ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಂಸ್ಥೆಯ ಜನಪರ ಕಾರ್ಯ ಹೀಗೆ ಮುಂದುವರಿಯಲಿದೆ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಸನ್ಮಾನಿಸಲಾಯಿತು. ಪಿಂಕ್ ಆಟೋ ವಿತರಣೆಗೆ ಧನಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು.
ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಸೀಲ್ದಾರ್ ಪ್ರವೀಣ ಕರಾಂಡೆ, ಜಯಶ್ರೀ ಕಾಮತ್, ರಾಘವೇಂದ್ರ ಪ್ರಭು, ಜಿ.ಪಿ. ಹೆಗಡೆ, ಸುಮಿತ್ರಾ ಕೌಶಿಕ್, ಎಸ್.ಎನ್. ಹೆಗಡೆ ಇತರರಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎಂ. ಹೆಗಡೆ ಹಾಗೂ ದಿನೇಶ ಕಾಮತ ಕಾರ್ಯಕ್ರಮ ನಿರ್ವಹಿಸಿದರು.