

ದೇವದುರ್ಗ: ನಾಡಿನ ಭಾಷೆ, ನೆಲಜಲಕ್ಕಾಗಿ ಕನ್ನಡ ಶಾಲೆಗಳು ಬೇಕಾಗಿವೆ. ಹಾಗಾಗಿ ಶಾಲೆಗಳ ಉಳುವಿಗೆ ಸಮಾಜದ ಸಹಕಾರ ಅಗತ್ಯ ಎಂದು ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಸುಭಾಷ್ಚಂದ್ರ ಪಾಟೀಲ್ ಹೇಳಿದರು.
ತಾಲೂಕಿನ ಜಾಲಹಳ್ಳಿ ಹೋಬಳಿಯ ಕಕ್ಕಲದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಎಂಟು ಬೆಂಚ್ ವಿತರಣಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಇದನ್ನೂ ಓದಿ: ಪಿಕಾರ್ಡ್ ಬ್ಯಾಂಕ್ನಿಂದ ಹೆಚ್ಚು ಹಣ ವಸೂಲಿ ತಂತ್ರ
ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಅದರ ಮೂಲ ಉದ್ದೇಶ ಸಮಾಜ ಸೇವೆಯಾಗಿದೆ. ಶಾಲೆಗೆ ಬೆಂಚ್‌ಗಳನ್ನು ನೀಡಲಾಗಿದ್ದು, ಇವುಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲಿ ಎಂದರು.
ರೋಟರಿ ಡೈಮಂಡ್ ಕ್ಲಬ್ ಸದಸ್ಯ ಸಂಜೀವರೆಡ್ಡಿ ಸಾಹುಕಾರ ಮಾತನಾಡಿ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳು ಇರುವುದಿಲ್ಲ. ಸಮಾಜದಲ್ಲಿ ಉಳ್ಳವರು ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಬೇಕಿದೆ. ಶಾಲಾ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಹೇಳಿದರು.
ಕ್ಲಬ್ ಅಸಿಸ್ಟೆಂಟ್ ಗವರ್ನರ್ ಶಿವಶಂಕರ ವಕೀಲ, ಸದಸ್ಯ ನಿಜಾನಂದ ರಡ್ಡಿ, ಶರಣು ಹುಣಸಿಗಿ, ವೀರೇಶ, ವೆಂಕಟರಾಯಗೌಡ ಬೆನಕನ, ಶಿವುಕುಮಾರ ಮೇಟಿ, ಹನುಮಂತರಡ್ಡಿ ಗೌರಂಪೇಟೆ, ಹನುಮರಡ್ಡಿ ಪಾಟೀಲ್, ಮುಖ್ಯಶಿಕ್ಷಕ ನದಾಫ್ ಇತರರಿದ್ದರು.