

ಹುಬ್ಬಳ್ಳಿ: ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸ್ತುತ್ಯರ್ಹ ಕಾರ್ಯ. ನಮ್ಮ ಸಂಸ್ಥೆ ಕೂಡ ರೋಟರಿ ಕ್ಲಬ್ ಜತೆಗೂಡಿ ಆರೋಗ್ಯ ಕ್ಷೇತ್ರ ಸೇರಿ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದೆ. ಮುಂದೆಯೂ ಮಾಡಲಿದೆ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಹೇಳಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ ಗುರುವಾರ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ರೋಟರಿ ಸಂಭ್ರಮ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಪತ್ರಿಕೆಗಳಿಗೆ ಜಾಹೀರಾತು ವಿಭಾಗವು ಆದಾಯ ತರುವ ಕೆಲಸ ಮಾಡುತ್ತದೆ. ಅಂತಹ ವಿಭಾಗದ ಸಾಧಕರನ್ನು ಕ್ಲಬ್ ನವರು ಸನ್ಮಾನಿಸಿರುವುದರಿಂದ ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುವವರನ್ನು ಗುರುತಿಸಿದಂತಾಗಿದೆ. ಸನ್ಮಾನಕ್ಕೆ ಅರ್ಹರಾದವರು ಕಠಿಣ ಪರಿಶ್ರಮ ವಹಿಸುವವರಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ಸೇವೆಗೆ ಸದಾ ಸಿದ್ಧ: ಅತಿಥಿಯಾಗಿದ್ದ ರೋಟರಿ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಗಿರೀಶ ಮಾಸೂರಕರ್ ಮಾತನಾಡಿ, ರೋಟರಿ ಕ್ಲಬ್ ಸಮಾಜಕ್ಕೆ ಏನು ಮಾಡಬಲ್ಲದು ಎಂಬುದನ್ನು ಪೊಲೀಯೋ ನಿರ್ಮೂಲನೆಗೆ ನೀಡಿದ ಕೊಡುಗೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ರಿಸ್ಕ್ ಗಳು ಇದ್ದೇ ಇರುತ್ತವೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಜೀವನ ಸಾರ್ಥಕ ಆಗಬೇಕಾದರೆ ಸಮಾಜಕ್ಕೆ ಕೊಡುಗೆ ನೀಡಬೇಕು. ರೋಟರಿ ಕ್ಲಬ್ ಇಂತಹ ಕಾರ್ಯಕ್ಕೆ ವೇದಿಕೆ ಒದಗಿಸುತ್ತದೆ ಎಂದು ಹೇಳಿದರು.
ವಿನಮ್ರತೆ ಅಗತ್ಯ: ಕೀರ್ತಿ ಕಳಶ ಉದ್ಯಮಿ ಪ್ರಶಸ್ತಿ ಸ್ವೀಕರಿಸಿದ ವಿಭವ ಗ್ರುಪ್ ಆಫ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ನಂದಕುಮಾರ ಎಚ್.ಎನ್. ಮಾತನಾಡಿ, ಬಾವಿಯಲ್ಲಿ ಕೊಡ ಬಾಗಿದಾಗ ಹೇಗೆ ನೀರು ತುಂಬಿಕೊಳ್ಳುತ್ತದೆಯೋ ಹಾಗೆಯೇ ಮನುಷ್ಯ ಒಂದಿಷ್ಟು ಬಾಗಿದಾಗಲೇ ಸಮಾಜದಿಂದ ಏನನ್ನಾದರೂ ಕಲಿಯಲು ಹಾಗೂ ಗಳಿಸಿಕೊಳ್ಳಲು ಸಾಧ್ಯ. ಹಾಗಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಮ್ರತೆ ಮೈಗೂಡಿಸಿಕೊಳ್ಳಬೇಕು ಎಂದರು.
ನಾವು ಮಾಡಿರುವ ಅಲ್ಪ ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ನವರು ಸನ್ಮಾನ ಮಾಡುತ್ತಿರುವುದು ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಮಹಿಳಾ ಉದ್ಯಮಿ ಪ್ರಶಸ್ತಿ ಪಡೆದ ಪ್ರಕಲ್ಪ ಗ್ರುಪ್ ನಿರ್ದೇಶಕಿ ಕಲ್ಪನಾ ಪಿ. ನಾಯಕ ಮಾತನಾಡಿ, ಮಹಿಳೆಯರು ಯಾವುದೇ ಸವಾಲು ಇದ್ದರೂ ಎದುರಿಸಬಲ್ಲರು ಹಾಗೂ ನಿಭಾಯಿಸುತ್ತಾರೆ. ಹೆಣ್ಣು ಅಬಲೆಯಲ್ಲ ಎಂಬುದನ್ನು ನಾರಿಯರು ಸಾಧಿಸಿ ತೋರಿಸಿದ್ದಾರೆ. ಆಪರೇಶನ್ ಸಿಂಧೂರವನ್ನು ಇಬ್ಬರು ಹೆಣ್ಣು ಮಕ್ಕಳು ನಿಭಾಯಿಸಿ ಜಗತ್ತಿನ ಗಮನ ಸೆಳೆದರು. ಹಾಗಾಗಿ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದರು.
ಪ್ರಶಸ್ತಿ ವಿಜೇತರು: ನಂದಕುಮಾರ ಎಚ್.ಎನ್. ಕೀರ್ತಿ ಕಳಶ ಉದ್ಯಮಿ, ಕಲ್ಪನಾ ನಾಯಕ ಮಹಿಳಾ ಉದ್ಯಮಿ, ಸಾಕೇತ ಶೆಟ್ಟಿ ಯುವ ಸಾಧಕ, ವಿಜಯವಾಣಿ ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಭಿಸೆ ಹಾಗೂ ದಿವಾಕರ ಭಟ್ ಅವರಿಗೆ ಮಾಧ್ಯಮ ಜಾಹೀರಾತು ವಿಭಾಗದ ಸಾಧಕರು ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕ ಪಟ್ಲ ಸತೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹ ಧನ ಹಾಗೂ ಓರ್ವ ಮಹಿಳೆಗೆ ಹೊಲಿಗೆ ಯಂತ್ರ ದೇಣಿಗೆ ನೀಡಲಾಯಿತು.
ಯಕ್ಷಗಾನ ಪ್ರದರ್ಶನ: ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ಶ್ರೀದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನವನ್ನು ತುಂಬಿದ ಸಭಾಗ್ರಹದಲ್ಲಿ ಪ್ರದರ್ಶನ ನೀಡಲಾಯಿತು.
ಕ್ಲಬ್ ಅಧ್ಯಕ್ಷ ದಿನೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರವಿಣ ಬನ್ಸಾಲಿ, ಸಂಜನಾ ಮಹೇಶ್ವರಿ ಹಾಗೂ ಇತರರು ಇದ್ದರು.