

ಮಂಡ್ಯ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಿಜಯನಗರ ರೋಟರಿ ಸಂಸ್ಥೆ ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಕೊಡುಗೆ ನೀಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಟರ್ ಫಿಲ್ಟರ್, 210 ಮಕ್ಕಳಿಗೆ ಬ್ಯಾಗ್, 25 ಡೆಸ್ಕ್, 5 ಕಂಪ್ಯೂಟರ್ ವಿತರಿಸಿದರು. ಮಾತ್ರವಲ್ಲದೆ, ಗ್ರಂಥಾಲಯ ಕೊಠಡಿ ನಿರ್ಮಾಣಕ್ಕೆ ಧನ ಸಹಾಯ ಮಾಡಿದರು. ಇದೇ ಸಂದರ್ಭದಲ್ಲಿ ಸಮಾಜಸೇವಕ ದೊಡ್ಡ ಮುದ್ದೇಗೌಡ(ಅರುಣ್) ಶಾಲೆಯಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಾಣ ಸೇರಿದಂತೆ ಮಕ್ಕಳಿಗೆ ಆಟದ ಸಾಮಗ್ರಿ, ಜೋಕಾಲಿ ಜತೆಗೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಆರ್ಥಿಕ ನೆರವು ನೀಡಿದರು. ಅಂತೆಯೇ ಕೀಲಾರ ಗ್ರಾಮ ಪಂಚಾಯಿತಿ ವತಿಯಿಂದ ಕಾಂಪೌಂಡ್ ನಿರ್ಮಾಣಕ್ಕೆ ಧನ ಸಹಾಯ ನೀಡಲಾಯಿತು.
ವಿಜಯನಗರ ರೋಟರಿ ಸಂಸ್ಥೆ ಅಧ್ಯಕ್ಷ ಶಶಿಮೌಳಿ, ದಾನಿ ಪಿ.ವಿ.ರಾಯ್, ಸತೀಶ್ ಮಾಧವನ್, ಸುಶೀತಾ, ಕೀಲಾರ ಗ್ರಾಪಂ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ರಮೇಶ್, ಶ್ರೀಧರ್, ಲಯನ್ಸ್‌ನ ಚಂದ್ರಮೌಳಿ, ಮುಖಂಡರಾದ ಕೆ.ಟಿ.ವೀರಪ್ಪ, ಜಯರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಬೂದನೂರು ರಘು ಇತರರಿದ್ದರು. ಇದೇ ವೇಳೆ ದಾನಿಗಳು ಹಾಗೂ ನಿವೃತ್ತ ಅಡುಗೆ ಸಿಬ್ಬಂದಿ ಗೀತಾ ಅವರನ್ನು ಸನ್ಮಾನಿಸಲಾಯಿತು.