ಕಾನೂರು ಶಾಲೆ ವಿದ್ಯಾರ್ಥಿಗಳಿಗೆ ರೋಟರಿ ಕೊಡುಗೆ

rotary
Published on

ಮಡಿಕೇರಿ:

ಸರ್ಕಾರಿ ಶಾಲೆಗಳ ಬಲವರ್ಧನೆ ಕಾರ್ಯಕ್ರಮಗಳು ಈ ವರ್ಷದ ರೋಟರಿ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಎಂದು ರೋಟರಿ ವಲಯ 6 ರ ಸಹಾಯಕ ಪ್ರಾಂತಪಾಲ ಧಿಲನ್ ಚೆಂಗಪ್ಪ ಹೇಳಿದರು. ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯು ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ದಾನಿಗಳ ಕೊರತೆ ಎಂದಿಗೂ ಬಾರದು. ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕೆಂಬ ಮನೋಭಿಲಾಷೆಯೊಂದಿಗೆ ಮುಂದೆ ಬರುತ್ತಿರುವುದು ಸ್ವಾಗತಾರ್ಹವಾಗಿದೆ. ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ರೋಟರಿಯು ಪ್ರಮುಖ ಪ್ರಶಸ್ತ್ಯ ನೀಡುತ್ತಿದ್ದು ಅಂಗನವಾಡಿ ಕೇಂದ್ರಗಳ ಉನ್ನತೀಕರಣವೂ ರೋಟರಿಯ ಗುರಿಯಾಗಿದೆ ಎಂದರು.

ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ವಾಮನ ಮಾತನಾಡಿ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ಪೊನ್ನಂಪೇಟೆ ತಾಲೂಕಿನ 15 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಒಂದನೇ ತರಗತಿಯನ್ನು ಆರಂಭಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ ಶಾಲಾ ಮಕ್ಕಳ ದಾಖಲಾತಿ ಆಂದೋಲನವನ್ನು ಮಾಡಬೇಕಿದೆ. ಶಾಲೆಯ ಹಿರಿಯ ವಿದ್ಯಾರ್ಥಿಗಳು ಉದಾರ ಮನಸ್ಸಿನೊಂದಿಗೆ ಶಾಲೆಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಗೋಣಿಕೊಪ್ಪಲು ರೋಟರಿ ಅಧ್ಯಕ್ಷ ಪಿ.ಆರ್. ವಿಜಯ್, ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವಲಯ ಸೇನಾನಿ ಕೆ. ರಮೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಮಾಜಿ ಸೈನಿಕ ವಿ.ಎಸ್. ರಮೇಶ್ ಸುಮಾರು 15 ಸಾವಿರ ರೂ. ವೆಚ್ಚದ ಶೈಕ್ಷಣಿಕ ಪರಿಕರಗಳನ್ನು ಶಾಲೆಗೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಬಿಂದು, ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಿ, ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ್ ಕಾಮತ್, ಕಾನೂರು- ಕೋತೂರು ಮಹಿಳಾ ಸಂಘದ ಅಧ್ಯಕ್ಷೆ ಮಧು ಬೋಪಯ್ಯ, ಶಾಲೆಯ ಮುಖ್ಯ ಶಿಕ್ಷಕಿ ಭವಾನಿ, ಬಿ ಆರ್ ಸಿ ಅರುಣ್ ಕುಮಾರ್, ಶಿಕ್ಷಕಿ ಸೌಮ್ಯ, ರೋಟರಿ ಸದಸ್ಯರಾದ ಸಿ.ಎನ್. ವಿಜಯ್, ಬಿ.ಆರ್. ಗಣೇಶ್, ಇಮ್ಮಿ ಉತ್ತಪ್ಪ, ಜಮುನಾ ತಿಮ್ಮಯ್ಯ, ಪಿ.ಬಿ. ಪೂಣಚ್ಚ, ಧಿನು ಚಿನ್ನಪ್ಪ, ಕರ್ನಲ್ ಕರಂಬಯ್ಯ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net