

ಮಡಿಕೇರಿ: ತಮ್ಮ ಕೆಲಸದಲ್ಲಿ ಬದ್ಧತೆಯೊಂದಿಗೆ ಪರಿಪೂರ್ಣತೆ ಇದ್ದಾಗ ಸಫಲತೆ ಸಾಧ್ಯ ಎಂದು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕ ದೇವಣಿರ ತಿಲಕ್ ಪೊನ್ನಪ್ಪ ಹೇಳಿದರು.
ಮರಗೋಡು ಭಾರತಿ ಸಂಯುಕ್ತ ಶಿಕ್ಷಣ ಸಂಸ್ಥೆಯಲ್ಲಿ ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಉತ್ತಮ ಜನಶಕ್ತಿ, ಭಾಷೆ ಕರಗತಗೊಳಿಸಿಕೊಳ್ಳಬೇಕು. ಪ್ರೌಢಶಾಲೆ ಹಂತದಲ್ಲಿ ರೋಟರಿ ಸಂಸ್ಥೆಯ ಯುವ ಘಟಕವಾಗಿರುವ ಇಂಟರ್ಯಾಕ್ಟ್ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಸಾಧನೆ ಹಾದಿಗೆ ಮುಕ್ತ ಅವಕಾಶವಿದೆ ಎಂದರು.
ಇಂಟರ್ಯಾಕ್ಟ್ ಸಮನ್ವಯಾಧಿಕಾರಿ ಅಜಿತ್ ನಾಣಯ್ಯ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಪ್ರತಿಭೆಯಿರುತ್ತದೆ. ಅವಕಾಶ ದೊರಕಿದಾಗ ವಿಳಂಬ ಮಾಡದೇ ಅವಕಾಶ ಶಕ್ತಿಯಾಗಿ ಬಳಸಿಕೊಳ್ಳಬೇಕೆಂದರು. ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಯಾವುದೇ ಸಮಸ್ಯೆ ಎದುರಾದರೂ ಅದನ್ನು ಛಲದಿಂದ ಎದುರಿಸಬಲ್ಲ ಕೆಚ್ಚೆದೆ ನಾಯಕತ್ವ ಗುಣ ಇರುವವನಲ್ಲಿ ಕಂಡು ಬರುತ್ತದೆ ಎಂದರು.
ಮರಗೋಡು ಸಂಯುಕ್ತ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಕಟ್ಟೆಮನೆ ಸೋನಜಿತ್ ಮಾತನಾಡಿ, ಸಾಮಾಜಿಕ ಸೇವಾ ಕಳಕಳಿಗೆ ರೋಟರಿ ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.
ಪ್ರೌಢಶಾಲೆಗೆ ಅಗತ್ಯ ಪರಿಕರ ಕೊಡುಗೆಯಾಗಿ ನೀಡುವುದಾಗಿ ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕ ಅಂಬೆಕಲ್ ವಿನೋದ್ ಘೋಷಿಸಿದರು. ಇಂಟರ್ಯಾಕ್ಟ್ ನೂತನ ಅಧ್ಯಕ್ಷೆ ಶಾಹಿನ ಎಂ.ಜೆಡ್, ಕಾರ್ಯದರ್ಶಿ ಎಫ್.ಆಸ್ನ, ಉಪಾಧ್ಯಕ್ಷೆ ಡಿ.ಎಸ್. ರಶ್ಮಿ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಅಧ್ಯಕ್ಷ ಎಚ್.ಟಿ. ಅನಿಲ್, ನಿರ್ದೇಶಕರಾದ ಕೋಚನ ಲವಿನ್, ಪಿ.ಎಂ. ಸಂದೀಪ್, ಶಿಕ್ಷಣ ಸಂಸ್ಥೆ ಮುಖ್ಯೋಪಾಧ್ಯಾಯರಾದ ಸುರೇಶ್ ನಾಯಕ್, ರವಿಕೃಷ್ಣ, ಇಂಟರ್ಯಾಕ್ಟ್ ಸಮನ್ವಯ ಶಿಕ್ಷಕಿ ಪೂರ್ಣಿಮ ಮತ್ತಿತರರು ಇದ್ದರು.