

ಮಂಗಳೂರು : ಜಿಲ್ಲಾ ರೋಟರಾಕ್ಟ್ ಸಂಸ್ಥೆಯ ಮತ್ತು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ. ಶಾಂತಾರಾಮ ವಾಮಂಜೂರು ಸ್ಮಾರಕ 19ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್‌ಕ್ಲಬ್ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟವು ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನೇತೃತ್ವದಲ್ಲಿ ಶನಿವಾರ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿತು.
ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ಸಾತ್ವಿಕ್ ಕೊಟೆಕಾರ್ ಮತ್ತು ಶಮನ್ ಜೋಡಿ ತಂಡವು ಪ್ರಥಮ ಸ್ಥಾನ ಗಳಿಸಿತು. ರೋಟರಾಕ್ಟ್ ಕ್ಲಬ್ ವನಚೈತನ್ಯ, ಬೆಂಗಳೂರು ಸಂಸ್ಥೆಯನ್ನು ಪ್ರತಿನಿಧಿಸಿದ ಶ್ರೀಖರ್ ದ್ವಿತೀಯ ಸ್ಥಾನ ಪಡೆದರು.
ಖ್ಯಾತ ತುಳು ಚಲನಚಿತ್ರ ನಟ ಬೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಹೋದರ ದಿ.ಶಾಂತಾರಾಮ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ಧಾಕೂಟವನ್ನು ಆಯೋಜಿಸುವ ರೋಟರಾಕ್ಟ್ ಸಂಸ್ಥೆಯ ನಿಸ್ವಾರ್ಥ ಸಮಾಜಸೇವಾ ಕಾರ್ಯ ಶ್ಲಾಘನೀಯ ಎಂದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ಅಂತರಾಷ್ಟ್ರೀಯ ರೋಟರಾಕ್ಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಗುಂಟೂರು ನಗರ ಮೂಲದ ರವಿ ವಡ್ಲಮಣಿ ಗೌರವ ಅತಿಥಿಯಾಗಿ ಪಾಲ್ಗೊಂಡು, ರೋಟರಾಕ್ಟ್ ಸಂಸ್ಥೆಯ ಯುವ ಸದಸ್ಯರು ಸಂಸ್ಥೆಯ ಧ್ಯೇಯ, ನೀತಿ, ಮಾಹಿತಿ, ಉದ್ದೇಶಗಳ ಜ್ಞಾನವನ್ನು ವೃದ್ಧಿಸಬೇಕು ಮತ್ತು ಸಂಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ರೋಟರಾಕ್ಟ್ ಜಿಲ್ಲಾ ಚುನಾಯಿತ ಪ್ರತಿನಿಧಿ ಮೈಸೂರು ನಗರ ಮೂಲದ ಪ್ರಜ್ವಲ್, ರೋಟರಾಕ್ಟ್ ದಕ್ಷಿಣ ಏಶ್ಯ ಸಂಸ್ಥೆಯ ಅಧ್ಯಕ್ಷ ಡೇರಿಲ್ ಡಿಸೋಜ, ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಚುನಾಯಿತ ಅಧ್ಯಕ್ಷ ಭಾಸ್ಕರ್ ರೈ, ವಾಣಿ ವಾಮಂಜೂರ್ ಉಪಸ್ಥಿತರಿದ್ದರು. ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಟ್ಟದ 10 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿದ್ದವು. ಈ ಸ್ಪರ್ಧಾಕೂಟವನ್ನು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ನಿರೂಪಿಸಿದ್ದರು. ಕಾರ್ಯದರ್ಶಿ ಅಕ್ಷಯ್ ರೈ ವಂದಿಸಿದರು.
ದಿ. ಶಾಂತಾರಾಮ್ ವಾಮಂಜೂರ್ ಅವರು ಸಂಸ್ಥೆಯ ನಿಷ್ಠಾವಂತ ಸದಸ್ಯರಾಗಿದ್ದು, ನಿಸ್ವಾರ್ಥ ಸೇವಾ ಮನೋಭಾವ ಹೊಂದಿದ್ದು, 2006 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಕಸ್ಮಿಕ ವಾಹನ ರಸ್ತೆ ಅಪಘಾತದ ದುರಂತದಲ್ಲಿ ವಿಧಿವಶರಾಗಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ವಾರ್ಷಿಕ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ದೇವದಾಸ್ ರೈ ಹೇಳಿದರು.