

ನೆಲಮಂಗಲ: ಕೇಂದ್ರ ರೈಲ್ವೆ ಇಲಾಖೆಯ ರೋಲ್ ಆನ್ ರೋಲ್ ಆಫ್ ಯೋಜನೆಯಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರ‌್ಯಾಂಪ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಪ್ರಾದೇಶಿಕ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ ಚಿನ್ಮಯ್‌ಸಿಂಗ್ ಚಾಲನೆ ನೀಡಿದರು.
ರೈಲುಗಳಲ್ಲಿ ಸರಕು ತುಂಬಿದ ಲಾರಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸಾಗಾಟ ಮಾಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಿದೆ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಸಂಚರಿಸುತ್ತಿದ್ದ ಸರಕು ಸಾಗಣೆ ಲಾರಿಗಳ ಸುರಕ್ಷತೆ ಹಾಗೂ ಮಾಲಿನ್ಯ ತಡೆಗಟ್ಟುವ ಉದ್ದೇಶ ಯೋಜನೆಯದ್ದಾಗಿದೆ. ಜಿತೇಂದ್ರ ರಿಯಾಲಿಟಿ ಆ್ಯಂಡ್ ಇನ್ಫಾ ್ರಸ್ಟ್ರಕ್ಚರ್ ಪೈ.ಲಿ. ಎಂಬ ಖಾಸಗಿ ಸಂಸ್ಥೆಗೆ ರ‌್ಯಾಂಪ್ ಪಾರ್ಕ್ ಮತ್ತು ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ಚಿನ್ಮಯ್‌ಸಿಂಗ್ ಮಾಹಿತಿ ನೀಡಿದರು.
ಮಹಾರಾಷ್ಟ್ರದ ಸೊಲ್ಲಾಪುರದ ಬಾಳೆ ರೈಲ್ವೆ ನಿಲ್ದಾಣದಿಂದ ನೆಲಮಂಗಲದ ನಡುವೆ (682 ಕಿ.ಮೀ ಅಂತರ) ಸುಮಾರು 43 ಟ್ರಕ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆಯಿಂದ ಇಂಧನ ಉಳಿತಾಯವಾಗಲಿದ್ದು, ತೆರಿಗೆ, ಟೋಲ್ ಸುಂಕ, ಅಪಘಾತ ತಪ್ಪಿಸಬಹುದಾಗಿದೆ. ಚಾಲಕರ ಸುರಕ್ಷತೆ ಕಾಪಾಡುವ ಜತೆಗೆ ವಾಯುಮಾಲಿನ್ಯ ನಿಯಂತ್ರಿಸಬಹುದಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್ ಪಾಟೀಲ್ ತಿಳಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಿದ್ದುಪಾಟೀಲ್, ನಿರ್ದೇಶಕ ತುಮಕೂರು ಮಹೇಶ್, ಜಿ.ಎಸ್.ರಮೇಶ್, ಟಿ.ಆರ್.ಸುರೇಶ್, ವೆಂಕಟೇಶ್, ಸಿ.ಜಿ.ಮಂಜುನಾಥ್‌ಗೌಡ ಮತ್ತಿತರರಿದ್ದರು.