

ಮೈಸೂರು: ಪರಿಸರವಾದಿಗಳು ಅಡ್ಡಿಪಡಿಸದಿದ್ದಲ್ಲಿ ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಯೋಜನೆ ಜಾರಿಗೊಳಿಸಲು ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ವಿಜಯನಗರ 3ನೇ ಹಂತದ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಯೋಜನೆ ತರುವ ಕುರಿತು ಮೊದಲು ಸಿದ್ಧತೆ ಮಾಡಲಾಗಿತ್ತು. ಆದರೆ, ಪರಿಸರವಾದಿಗಳು ವಿರೋಧಿಸಿದ್ದರು. ಈಗ ಮತ್ತೆ ಮಾಡಲು ನಾವು ಸಿದ್ಧ. ಅದಕ್ಕೆ ಯಾರೂ ಅಡ್ಡಿಪಡಿಸಬಾರದು. ಅಡ್ಡಿಪಡಿಸದಂತೆ ನೀವು ನೋಡಿಕೊಳ್ಳಬೇಕು ಎಂದು ಹೋಟೆಲ್ ಉದ್ಯಮಿಗಳಿಗೆ ಸಲಹೆ ನೀಡಿದರು.
ನಂಜನಗೂಡು ತಾಲ್ಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು. ಅದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲ್ಲ ಎಂದರು.
ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮ ವಹಿಸಲಿದೆ ಎಂದುಭರವಸೆ ನೀಡಿದರು.
ಮೈಸೂರು ಪ್ರವಾಸಿತಾಣ, ಸಾಂಸ್ಕೃತಿಕ ನಗರವಾಗಿರುವ ಜತೆಗೆ ನಿತ್ಯ ಹೆಚ್ಚಿನ ಪ್ರವಾಸಿಗರು ಬರುವ ಕಾರಣ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಅದಕ್ಕೆ ಬೇಕಾದ ಯೋಜನೆ ರೂಪಿಸಲು ಸಿದ್ಧ. ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ನೆರವು ನೀಡಲಾಗುವುದು ಎಂದರು.
ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಹೋಟೆಲ್ ಮಾಲೀಕರ ಸಂಘದಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅವರು, ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲು ಪರಿಗಣಿಸಲಾಗುವುದು ಎಂದರು.
ಪ್ರವಾಸೋದ್ಯಮ-ಹೋಟೆಲ್ ಉದ್ಯಮಕ್ಕೂ ಸಂಬಂಧ ಇದೆ. ಪರಸ್ಪರ ಪೂರಕವಾಗಿವೆ. ಉಭಯ ಕ್ಷೇತ್ರ ಅಭಿವೃದ್ಧಿ ಆಗಬೇಕು. ಪ್ರವಾಸೋದ್ಯಮ ಬೆಳೆದರೆ ಪ್ರವಾಸಿಗರಿಗೆ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗಲಿದೆ. ಹೋಟೆಲ್ ಉದ್ಯಮ ಬೆಳವಣಿಗೆಯಾದರೆ ರಾಜ್ಯದ ಆದಾಯವೂ ಹೆಚ್ಚಾಲಿದೆ. ಆರ್ಥಿಕ ಚಟುವಟಿಕೆಯಿಂದ ಜಿಡಿಪಿ ವೃದ್ಧಿಯಾಗಲಿದೆ ಎಂದರು.
ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಿದ್ದಾರೆ. 1.16 ಕೋಟಿ ಮನೆ ಯಜಮಾನಿಗೆ 2 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಹಾಕುತ್ತಿರುವುದರಿಂದ ಪ್ರವಾಸಿ ತಾಣಗಳ ವೀಕ್ಷಣೆ ಸೇರಿದಂತೆ ವಿವಿಧ ಖರ್ಚು ಮಾಡುತ್ತಿದ್ದಾರೆ. ಇದರಿಂದಾಗಿ ಪ್ರವಾಸಿತಾಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ ಎಂದರು.
ಹೋಟೆಲ್ ಉದ್ಯಮ ನಡೆಸುವುದು ಸುಲಭವಲ್ಲ. ಇದು ಜೀವನಕ್ಕಾಗಿ ಅಲ್ಲ. ಅದೊಂದು ವೃತ್ತಿ. 50 ವರ್ಷಗಳ ಕಾಲ ಉದ್ಯಮ ನಡೆಸಿಕೊಂಡು ಬರುವುದು ದೊಡ್ಡ ಕೆಲಸ. ವರನಟ ಡಾ.ರಾಜ್‌ಕುಮಾರ್ ಅವರು ‘ಅಭಿಮಾನಿಗಳೇ ನನ್ನ ದೇವರು’ ಹೇಳಿರುವಂತೆ ಹೋಟೆಲ್ ಮಾಲೀಕರು ಅತಿಥಿ ದೇವೋಭವ ಎನ್ನುವಂತೆ ಸತ್ಕರಿಸುತ್ತಿದ್ದಾರೆ ಎಂದರು.
ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಹೋಟೆಲ್‌ನಲ್ಲಿ ಮೂರು ಹೊತ್ತು ತಿಂಡಿ-ಊಟ ಮಾಡುತ್ತಿದ್ದೆ. ದಿನಾಲೂ ಚೆನ್ನಾಗಿರುವ ಹೋಟೆಲ್‌ಗೆ ಹುಡುಕಿ ಹೋಗುತ್ತಿದ್ದೆ. ರಾತ್ರಿ ಹೊತ್ತು ನಾನ್‌ವೆಜ್ ಹೋಟೆಲ್ ಹುಡುಕಾಟ ನಡೆಸುತ್ತಿದ್ದೆ ಎಂದು ನೆನಪು ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್‌ಸೇಠ್, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಹೋಟೆಲು ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗ್ಡೆ, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ, ಪದಾಧಿಕಾರಿಗಳಾದ ಹೇಮಂತ್ ಕುಮಾರ್ ಭಟ್, ಸುಮಿತ್ರಾ ಆನಂದ್ ತಂತ್ರಿ ಇತರರಿದ್ದರು.
ಸಿಎಂಗೆ ಮನವಿ: ಹೋಟೆಲ್ ಮಾಲೀಕರ ಸಂಘದಿಂದ ಸಿಎಂಗೆ ಮನವಿ ಸಲ್ಲಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ, ಚಾಮುಂಡಿಬೆಟ್ಟಕ್ಕೆ ರೋಪ್‌ವೇ ನಿರ್ಮಾಣ, ಚಿತ್ರನಗರಿ ಸ್ಥಾಪನೆ, ಯುವ ಕಾರ್ಮಿಕರಿಗೆ ತರಬೇತಿ ಕೊಡಲು ಕೇಂದ್ರವನ್ನು ನಿರ್ಮಾಣ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಗೆ ಮನವಿ ಮಾಡಿದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಾ ಮಾಡಿದ್ದೇನೆಂದು ಪ್ರತಾಪ್ ಸಿಂಹ ಬರೀ ಬುರುಡೆ ಬಿಡುತ್ತಾರೆ. ನೀವು ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು ಎಂದು ಸಿಎಂ ಹರಿಹಾಯ್ದರು.
ಈ ರೋಡ್ ಮೈಸೂರಿಗೆ ಬರೀ ಎಂಟು ಕಿಮೀ ಸೇರಿದೆ. ನಾನು, ಡಾ.ಮಹದೇವಪ್ಪ ಇದ್ದಾಗ ಈ ಯೋಜನೆಯನ್ನು ಮಾಡಿದ್ದೆವು. ಆದರೆ, ಪ್ರತಾಪ್ ಸಿಂಹ ನಾ ಮಾಡಿದ್ದೇನೆಂದು ಬುರುಡೆಬಿಟ್ಟರು ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದವು. ನಾವು ಹೋದ ಮೇಲೆ ಯಾವ ಅಭಿವೃದ್ಧಿ ಕೆಲಸಗಳಾಗಲಿಲ್ಲ. ನಾವು ಹೇಳಿದನ್ನು ಮಾಡುತ್ತೇವೆ. ಅದರಂತೆ ನಡೆಯುತ್ತೇವೆ. ಮಾಡಿರುವ ಕೆಲಸವನ್ನು ಪ್ರಶಂಸಿಸಬೇಕು ಹೊರತು ವಿರೋಧ ಮಾಡುವುದಲ್ಲ. ನಾವು ಕೆಲಸ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.