

ಲಿಂಗದಹಳ್ಳಿ: ಕಲ್ಲತ್ತಿಪುರ -ಲಾಲ್‌ಬಾಗ್ ರಸ್ತೆಯ ರೂಪ್‌ಲೈನ್ ಗ್ರಾಮದಿಂದ ಮಸ್ಕಲ್ ಮರಡಿವರೆಗಿನ ರಸ್ತೆ ತೀರ ಹದಗೆಟ್ಟಿರುವುದರಿಂದ ವಾಹನ ಸವಾರರು ಹರಸಹಾಸ ಪಡುವಂತಾಗಿದೆ ಎಂದು ರೂಪ್‌ಲೈನ್, ದೂಪದಖಾನ್, ಕತ್ಲೇಖಾನ್, ನಂದಿಗಾವೆ, ದಂಡು ಬಿಡಾರ ಗ್ರಾಮಸ್ಥರು ಆರೋಪಿಸಿದ್ದಾರೆ.
ಭೀಮನಹಳ್ಳದಿಂದ ವರ್ತೆಗುಂಡಿ, ರೂಪ್‌ಲೈನ್, ತಣಿಗೆಬೈಲು ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಈ ರಸ್ತೆಯ ಬದಿಗಳಲ್ಲೇ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಅವು ನೀರು ಸರಬರಾಜು ಮಾಡುವ ಪ್ಲಾಸ್ಟಿಕ್ ಪೈಪ್‌ಗಳು ಹೊಡೆದು ಹೊಗುತ್ತಿರುವುದರಿಂದ ನೀರು ರಸ್ತೆ ಮೇಲೆ ಹರಿದು ರಸ್ತೆಯಲ್ಲಿ ಗುಂಡಿಮಯವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೊಡೆದು ಹೋದ ಪೈಪ್‌ಗಳನ್ನು ದುರಸ್ತಿ ಮಾಡಿ ನೀರು ರಸ್ತೆಗೆ ಹರಿಯುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ರಸ್ತೆ ತುಂಬಾ ಗುಂಡಿಗಳಾಗಿರುವುದರಿಂದ ದ್ವಿಚಕ್ರ ವಾಹನಗಳಲ್ಲಿ ಸರಣಿ ಅಪಘಾತಗಳಾಗುತ್ತಿವೆ. ಅನೇಕ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಯಾ ತಪ್ಪಿ ಬೀದ್ದು, ಅಪಘಾತ ಸಂಭವಿಸಿದೆ. ಆದ್ದರಿಂದ ಕೂಡಲೇ ಈ ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.