

ಮಡಿಕೇರಿ: ವನ್ಯಜೀವಿ-ಮಾನವ ನಡುವಿನ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರೋಪ್ ಫೆನ್ಸ್ ಅಳವಡಿಕೆಯನ್ನು ಪ್ರಾಯೋಗಿಕವಾಗಿ ೫ ಕೋಟಿ ರೂ ವೆಚ್ಚದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದರು.
ನಗರದಲ್ಲಿ ಕೊಡಗು ಕಾಫಿ ಬೆಳೆಗಾರರ ಸಂಘದ ೧೪೩ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಮುಖವಾಗಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಬಜೆಟ್‌ನಲ್ಲಿ ನಿಗಧಿಪಡಿಸಿರುವ ೫ ಕೋಟಿ ರೂಗೆ ಹೆಚ್ಚುವರಿಯಾಗಿ ಮತ್ತೆ ೫ ಕೋಟಿ ರೂ ಅನುದಾನವನ್ನು ಕಾಡಾನೆ ಹಾವಳಿ ತಡೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ಅಳವಡಿಸಿ ಯಶಸ್ವಿಯಾಗಿರುವ ರೋಪ್ ಫೆನ್ಸ್ ತಂತ್ರಜ್ಞಾನವನ್ನೂ ಈ ಅನುದಾನ ಬಳಸಿಕೊಂಡು ಶೀಘ್ರದಲ್ಲಿಯೇ ಪ್ರಾಯೋಗಿಕವಾಗಿ ನಾಗರಹೊಳೆಯಲ್ಲಿಯೂ ಅಳವಡಿಸಲಾಗುತ್ತದೆ. ವನ್ಯಜೀವಿಗಳಿಂದ ಕಷಿ ಜಮೀನು ಹಾನಿಗೆ ಶೇ.೧೦೦ ರಷ್ಟು ಪರಿಹಾರ ನೀಡಲು ವಾಸ್ತವ ನೆಲೆಗಟ್ಟಿನಲ್ಲಿ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಭಾರತೀಯ ಕಾಫಿಯನ್ನು ಆಂತರಿಕ ಬಳಕೆಗೆ ಹೆಚ್ಚು ಬಳಸಬೇಕು. ವಿದೇಶಿ ಸಂಸ್ಥೆಗಳೂ ಈಗಾಗಲೇ ಭಾರತದಾದ್ಯಂತ ಕಾಫಿ ಮಳಿಗೆ ಪ್ರಾರಂಭಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಫಿ ದೊರಕುವಂತಾಗಿದೆ. ಹೀಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾಗಿಲ್ಲ. ಹಳ್ಳಿಗಳಲ್ಲಿಯೂ ನಗರಗಳ ಮಾದರಿಯಲ್ಲಿ ಕಾಫಿ ಪೇಯ ಮಾರಾಟದ ಸಣ್ಣ ಅಂಗಡಿಗಳು ತೆರೆದರೆ ಕಾಫಿಯ ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.
೨೦೧೫-೧೬ ನೇ ಸಾಲಿನಲ್ಲಿ ೩.೦೫ ಮೆಟ್ರಿಕ್ ಟನ್ ಉತ್ಪಾದಿಸಲ್ಪಡುತ್ತಿದ್ದ ಭಾರತೀಯ ಕಾಫಿ ೨೦೨೨-೨೩ನೇ ಸಾಲಿನಲ್ಲಿ ದಾಖಲೆಯ ೪ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಕಾಫಿ ಬೆಳೆಗಾರರರಿಗೆ ಆರ್ಥಿಕವಾಗಿಯೂ ಉತ್ತಮ ವರ್ಷವಾಗುವ ಆಶಾಕಿರಣಕ್ಕೆ ಕಾರಣವಾಗಿದೆ ಎಂದು ಭರವಸೆ ನೀಡಿದ ಅವರು, ಭಾರತದಲ್ಲಿನ ಅರೆಬಿಕಾ ಕಾಫಿ ಇಂದಿಗೂ ವಿಶ್ವದಲ್ಲಿಯೇ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿರುವುದು ಭಾರತದ ಕಾಫಿಯ ಗುಣಮಟ್ಟದ ಶ್ರೇಷ್ಟತೆಗೆ ಉದಾಹರಣೆಯಾಗಿದೆ ಎಂದರು.
ಉಪಾಸಿಯ ಅಧ್ಯಕ್ಷ ಜೆಫ್ರಿ ರೆಬೆಲ್ಲೋ ಮಾತನಾಡಿ, ಕೊಲಂಬಿಯಾ, ಇಥೋಪಿಯಾ ಮಾದರಿಯಲ್ಲಿಯೇ ಭಾರತದ ಗ್ರೀನ್ ಕಾಫಿಯನ್ನು ಭಾರತೀಯ ಕಾಫಿಯ ಮಾದರಿಯನ್ನಾಗಿಸಿ ಕಾಫಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಭಾರತದ ಅತ್ಯುತ್ತಮ ಗುಣಮಟ್ಟದ ಕಾಫಿಗೆ ಜಾಗತಿಕ ಮಟ್ಟದಲ್ಲಿಯೂ ಮೌಲ್ಯವರ್ಧನೆಯೊಂದಿಗೆ ಭಾರತೀಯ ಶುದ್ದ ಕಾಫಿಗೆ ಬೇಡಿಕೆ ವೃದ್ಧಿಯಾಗಲಿದೆ. ಭಾರತೀಯ ಕಾಫಿ ಈಗಾಗಲೇ ತನ್ನ ಸ್ವಾದದ ಮೂಲಕ ವಿಶ್ವಮಟ್ಟದಲ್ಲಿ ರಾಯಲ್ ಕಾಫಿ ಎಂದು ಮನ್ನಣೆ ಹೊಂದುವಂತಾಗಿದೆ. ಭಾರತೀಯ ಕಾಫಿ ಬೆಳೆಗಾರರೊಂದಿಗೆ ಉಪಾಸಿ ಸದಾ ಸಮನ್ವಯತೆ ಹೊಂದಿದೆ ಎಂದರು.
ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ ಮೂರ್ತಿ ಮಾತನಾಡಿ, ಕಾಡಿನಲ್ಲಿ ಕಳೆದ ೧೦ ವರ್ಷಗಳಿಗೆ ಹೋಲಿಸಿದರೆ ಬಿದಿರು ಮೆಳೆ ಪ್ರಮಾಣ ಕಡಮೆಯಾಗಿರುವುದು ಕೂಡ ಕಾಡಾನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣವಾಗಿದೆ. ಇದನ್ನು ನಿವಾರಿಸಲು ಕೊಡಗು ಜಿಲ್ಲೆಯಲ್ಲಿ ೧೫ ಸಾವಿರ ಮೆಟ್ರಿಕ್ ಟನ್‌ಗಳಷ್ಟು ಬಿದಿರು ಸಸಿ ನೆಡಲಾಗಿದೆ. ೧ ಸಾವಿರದಷ್ಟು ಕೊಳಗಳು ಕಾಡಿನೊಳಗಿದ್ದು ಇವುಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ ಎಂದರು.
ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಮೋಹನ್ ದಾಸ್ ಮಾತನಾಡಿ, ಕೊಡಗಿನಲ್ಲಿ ಕೃಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸರ್ಪಾಸಿ ಕಾನೂನಿನಿಂದಾಗಿ ಬ್ಯಾಂಕ್‌ಗಳು ಬೆಳೆಗಾರರಿಗೆ ಆರ್ಥಿಕ ಹೊಡೆತ ನೀಡುತ್ತಿದೆ. ಕಾಫಿಯನ್ನು ಕಷಿ ಬೆಳೆ ಎಂದು ಪರಿಗಣಿಸಿ ತೆರಿಗೆಯಿಂದ ಹೊರತಾಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಪ್ರಧಾನ ಮಂತ್ರಿ ಫಸಲು ಭಿಮ ಯೋಜನೆಯಲ್ಲಿ ಇತರ ಬೆಳೆಗಳನ್ನು ಪರಿಗಣಿಸಿರುವಂತೆಯೇ ಕಾಫಿಯನ್ನೂ ವಿಮೆಯಡಿ ತರಬೇಕೆಂದೂ ಬೆಳೆಗಾರರ ಸಂಘಟನೆಗಳು ಸರ್ಕಾರಕ್ಕೆ ಒತ್ತಡ ಹೇರಿದೆ ಎಂದು ವಿವರಿಸಿದರು.
ಮಹಾಸಭೆಯಲ್ಲಿ ಕೊಡಗು ಬೆಳೆಗಾರರ ಸಂಘದ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಉಪಾಧ್ಯಕ್ಷ ಸಿ.ಯು.ಅಶೋಕ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿದೆಡೆಗಳಿಂದ ಕೊಡಗು ಬೆಳೆಗಾರರ ಸಂಘದ ಸದಸ್ಯರು ಹಾಜರಿದ್ದರು.
’ಕೊಡಗು ಜಿಲ್ಲೆಯಲ್ಲಿರುವ ೧೩೦೦ ಕಾಡಾನೆಗಳ ಪೈಕಿ ೨೦೦ ರಷ್ಟು ಆನೆಗಳು ನಾಡಿಗೆ ಹೆಜ್ಜೆಯಿಕ್ಕುತ್ತಾ ಸಮಸ್ಯೆ ಸೃಷ್ಟಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಹುಲಿ ದಾಳಿಯನ್ನು ತಪ್ಪಿಸಲು ಈಗಾಗಲೇ ೩ ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ. ಈ ವರ್ಷ ೩ ಕಾಡಾನೆಗಳು ತೋಟಗಳ ನಡುವೆ ತಳಮಟ್ಟದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕೂಡ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ ವನ್ಯಜೀವಿಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರಕಾರ್ಯಪಡೆ ಅತ್ಯಂತ ವೇಗವಾಗಿ ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸುತ್ತಿದೆ’
ಬಿ.ಎನ್.ನಿರಂಜನ ಮೂರ್ತಿ, ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ