

ಮಂಡ್ಯ: ಜಿಲ್ಲೆಯಲ್ಲಿ ಕಬ್ಬು ಬೆಳೆಗೆ ಬೇರು ಹುಳು ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ವಿ.ಸಿ ಾರ್ಮ್‌ನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕಬ್ಬು ಬೆಳೆಗಾರರಿಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದ್ದಾರೆ.
ಹುಳು ಬಾಧೆ ಸಧ್ಯಕ್ಕೆ ಪ್ರಾರಂಭಿಕ ಹಂತದಲ್ಲಿದೆ. ಅಂತೆಯೇ ಈಗಾಗಲೇ ಆರು ತಾಲೂಕಿನಲ್ಲಿ ಈ ರೋಗ ಕಾಣಿಸಿಕೊಂಡಿದೆ. ಈಗಲೇ ಎಚ್ಚೆತ್ತುಕೊಂಡು ನಿರ್ವಹಣೆ ಮಾಡದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕಬ್ಬು ಬೆಳೆಯನ್ನು ಸುಮಾರು 40000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈಗಾಗಲೇ ವಿವಿಧ ಹಂತದಲ್ಲಿರುವ ಕಬ್ಬು ಬೆಳೆಯಲ್ಲಿ ಕೆಲವೆಡೆ ಬೇರುಹುಳುವಿನ ಬಾಧೆ ಕಾಣಿಸಿಕೊಂಡಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸಕಾಲದಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಬಾಧೆಗೊಳಗಾದ ಬೆಳೆಯಲ್ಲಿ ಶೇ.40 ರಿಂದ 80 ರಷ್ಟು ನಷ್ಟ ಉಂಟಾಗುವುದರ ಜತೆಗೆ ಸಕ್ಕರೆ ಇಳುವರಿ ಸಹ ಕುಂಠಿತವಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ರೈತರಿಗೆ ಹುಳುವಿನ ಗೊಂದಲ: ರೈತರಿಗೆ ಬೇರುಹುಳು ಮತ್ತು ಗೊಬ್ಬರದ ಹುಳುವಿನ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಪಷ್ಟತೆ ನೀಡಿದ್ದಾರೆ. ಅದರಂತೆ ಗೊಬ್ಬರದ ಹುಳು ಮತ್ತು ಬೇರುಹುಳು ವಿಭಿನ್ನ ಉಪಕುಟುಂಬಗಳಿಗೆ ಸೇರಿದ್ದರೂ ಬಣ್ಣ ಮತ್ತು ಆಕಾರದಲ್ಲಿ ಒಂದೇ ರೀತಿ ಇರುವುದರಿಂದ ರೈತರಿಗೆ ಗೊಂದಲ ಉಂಟಾಗುತ್ತದೆ. ಗೊಬ್ಬರದ ಹುಳು ಕೇವಲ ಗೊಬ್ಬರವನ್ನು ಮಾತ್ರ ತಿಂದು ಜೀವಿಸುತ್ತದೆ. ಮಾತ್ರವಲ್ಲದೆ ಸಂಪೂರ್ಣವಾಗಿ ಬೆಳೆದ ಗೊಬ್ಬರದ ಹುಳು, ಕೋಶಾವಸ್ಥೆಯ ನಂತರ ತೆಂಗಿನ ಸುಳಿ ಕೊರೆಯುವ ರೈನೋಸಿರಸ್ ದುಂಬಿಯಾಗುತ್ತದೆ. ಆದರೆ ಬೇರುಹುಳು ಸಸ್ಯದ ಜೀವಂತ ಬೇರನ್ನು ಮಾತ್ರ ತಿಂದು ಜೀವಿಸುತ್ತದೆ.
ಬೇರು ಹುಳುವಿನ ಬಾಧೆಯ ಲಕ್ಷಣ: ಬೇರು ಹುಳುವಿನಿಂದಾಗಿ ಕಬ್ಬು ಬೆಳೆಯಲ್ಲಿ ಕಾಣಿಸಿಕೊಳ್ಳುವ ಲಕ್ಷಣದ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೋಗ ಬಾಧೆಯಿಂದಾಗಿ ಕಬ್ಬಿನ ಗರಿಗಳು ಹಳದಿಯಾಗುವುದರ ಜತೆಗೆ ತ್ವರಿತ ಗತಿಯಲ್ಲಿ ಒಣಗುವುದು. ಅಂತೆಯೇ ಅಂತಹ ಗಿಡಗಳು ಗಿಡ್ಡವಾಗುತ್ತವೆ. ನಂತರ ಸೊರಗುತ್ತವೆ. ಇಂತಹ ಗಿಡಗಳನ್ನು ಕೈಯಿಂದ ಸುಲಭವಾಗಿ ಬುಡ ಸಮೇತ ಕೀಳಬಹುದು. ಮಾತ್ರವಲ್ಲದೆ ಬಾಧೆಗೊಳಗಾದ ಗಿಡಗಳ ಬುಡದ ಭಾಗದಲ್ಲಿ ಕೆನೆ ಬಿಳುಪು ಬಣ್ಣದ, ಕಿರು ಬೆರಳು ಗಾತ್ರದ ಮರಿಹುಳು ಕಂಡು ಬರುತ್ತವೆ. ಕೂಳೆ ಕಬ್ಬಿನಲ್ಲಿ ಬೇರುಹುಳುವಿನ ಹಾವಳಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.
ನಿರ್ವಹಣೆ ಮಾಡುವುದು ಹೇಗೆ?: ಬೇರು ಹುಳುಗಳ ಮರಿ ಹುಳುಗಳು ಮೂರನೇ ಹಂತವನ್ನು ತಲುಪುತ್ತವೆ. ಈ ಹಂತದಲ್ಲಿ ಹೆಚ್ಚಿನ ಬಾಧೆ ಉಂಟು ಮಾಡುವುದರಿಂದ ಬೆಳೆ ಒಣಗುವುದನ್ನು ರೈತರು ಗಮನಿಸುತ್ತಾರೆ. ಅಂತಹ ಒಣಗಿದ ಬುಡಗಳನ್ನು ಕಿತ್ತು ಮರಿ ಹುಳು ಇರುವುದನ್ನು ಖಚಿತ ಪಡಿಸಿಕೊಂಡು ನಂತರ ಎಕರೆಗೆ 500 ಮಿ. ಲೀ ಇಮಿಡಾಕ್ಲೋಪ್ರಿಡ್ (17.8 ಎಸ್.ಎಲ್.) ಅಥವಾ 2 ಲೀಟರ್ ಕ್ಲೋರೋಪೈರಿಫಾಸ್ (20 ಇ.ಸಿ.) ಕೀಟನಾಶಕವನ್ನು 800 ರಿಂದ 1000 ಲೀಟರ್ ನೀರಿನಲ್ಲಿ ಬೆರೆಸಿ ಮಣ್ಣಿಗೆ ಸೇರಿಸಿ ನಂತರ ಕಬ್ಬಿನ ಬುಡ ನೆನೆಯುವಂತೆ ಒಂದೆರಡು ದಿನ ಗದ್ದೆಯಲ್ಲಿ ನೀರು ನಿಲ್ಲಿಸಬೇಕು.
ಇನ್ನು ಜೈವಿಕ ಕ್ರಮವಾಗಿ ಎಕರೆಗೆ 2 ಕಿ. ಗ್ರಾಂ ಮೆಟರೈಝಿಯಂ ಅನಿಸೋಪ್ಲಿಯೆ ಶಿಲೀಂದ್ರವನ್ನು 100 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಬೇಕು. ಬಳಿಕ ಬೆಳೆಯ ಸಾಲಿನಲ್ಲಿ ಹಾಕಿ ನೀರು ಕೊಡಬೇಕು. ಈ ಶಿಲೀಂದ್ರವು ಜೈವಿಕ ಗೊಬ್ಬರಗಳ ಉತ್ಪಾದನಾ ಘಟಕ, ಕೃಷಿ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ವಿ.ಸಿ. ಫಾರ್ಮ್ ಮಂಡ್ಯ ಇಲ್ಲಿ ದೊರೆಯುತ್ತದೆ. ಮಾಹಿತಿಗಾಗಿ ಕೃಷಿ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಎನ್.ಆಶಾ ಅವರ ಮೊ.ಸಂ 9980542598 ಯನ್ನು ಸಂಪರ್ಕಿಸಬಹುದು.
ಪ್ರಮುಖ ಅಂಶವೆಂದರೆ ಕಟಾವು ಹಂತದಲ್ಲಿರುವ ಬೆಳೆಗೆ ಬೇರು ಹುಳುವಿನ ಭಾದೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಲ್ಲಿ ಕೂಳೆ ಬೆಳೆ ಬದಲಾಗಿ ಭತ್ತದ ಬೆಳೆಯನ್ನು ಬೆಳೆಯುವುದು ಸೂಕ್ತ. ರೋಗ ಹಾಗೂ ಅದರ ನಿರ್ವಹಣೆ ಬಗ್ಗೆ ಮಾಹಿತಿಗಾಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಕೀಟಶಾಸಜ್ಞೆ ಡಾ.ಜಿ.ಎಂ.ದರ್ಶಿನಿ ಅವರ ಮೊಬೈಲ್ ಸಂಖ್ಯೆ 6362275664 / 9481975260 ಯನ್ನು ಸಂಪರ್ಕಿಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಗ ಪತ್ತೆಯಾದ ಗ್ರಾಮಗಳಿವು
ಮಂಡ್ಯ ತಾಲೂಕಿನ ಶಿವಳ್ಳಿ, ಹಾಡ್ಯ, ಮಾರನಹಳ್ಳಿ, ಚೋಕನಹಳ್ಳಿ, ದುದ್ದ, ಸಂಪಹಳ್ಳಿ, ಗೊರವಾಲೆ, ಚಂದಗಾಲು, ಬೇಲೂರು, ಕನ್ನಹಟ್ಟಿ, ಹುಲಿವಾನ, ಮದ್ದೂರು ತಾಲೂಕಿನ ಸಬ್ಬನಹಳ್ಳಿ, ಕಾಡುಕೊತ್ತನಹಳ್ಳಿ, ಯಡಗನಹಳ್ಳಿ, ಕೆ.ಆರ್.ಪೇಟೆ ತಾಲೂಕಿನ ಬೊಮ್ಮೇನಹಳ್ಳಿ, ಕೂಡಲಕುಪ್ಪೆ, ಕೊಮ್ಮೇನಹಳ್ಳಿ, ನಾಗಮಂಗಲ ತಾಲೂಕಿನ ಸಾಮಕಹಳ್ಳಿ, ಸುನಗನಹಳ್ಳಿ, ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ, ಅಚ್ಚಪ್ಪನಕೊಪ್ಪಲು, ರಾಂಪುರ ಹಾಗೂ ಪಾಂಡಪುರ ತಾಲೂಕಿನ ಚಂದ್ರೆ, ಕಡತನಾಳು ಗ್ರಾಮದಲ್ಲಿ ರೋಗ ಕಾಣಿಸಿಕೊಂಡಿದೆ.