

ಮುಂಡಗೋಡ: ನಿರಂತರ ಮಳೆಯಿಂದ ತಾಲೂಕಿನಲ್ಲಿನ ಗೋವಿನಜೋಳ ಬೆಳೆಗೆ ಬೇರು ಕೊಳೆ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.
ಹತ್ತಾರು ವರ್ಷಗಳಿಂದೇಚೆಗೆ ತಾಲೂಕಿನ ಶೇ. 70ರಷ್ಟು ರೈತರು ಭತ್ತದ ಬೆಳೆ ಬೆಳೆಯುತ್ತಿದ್ದರು. ಅಲ್ಲದೆ, ತಾಲೂಕನ್ನು ಭತ್ತದ ಕಣಜವೆಂದು ಕರೆಯಲಾಗುತ್ತಿತ್ತು. ಆದರೆ, ಮಳೆಗಾಲದಲ್ಲಿ ಉಂಟಾಗುವ ವಾತಾವರಣದ ವ್ಯತ್ಯಾಸದಿಂದ ವರ್ಷಗಳು ಉರುಳಿದಂತೆ ರೈತರು ಆರ್ಥಿಕ ಬೆಳೆಗಳತ್ತ ಮುಖ ಮಾಡಿದ್ದಾರೆ.
ಅತಿಕ್ರಮಣ ಪ್ರದೇಶವೂ ಸೇರಿದಂತೆ ತಾಲೂಕಿನಲ್ಲಿ 21000 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 7000 ಹೆಕ್ಟೇರ್ ಭತ್ತದ ಬೆಳೆ, 6000 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ, 6300 ಹೆಕ್ಟೇರ್ನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಉಳಿದ ಪ್ರದೇಶದಲ್ಲಿ ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ.
ಬಿತ್ತನೆ ವಿಳಂಬ: ಪ್ರತಿ ವರ್ಷವೂ ತಾಲೂಕಿನ ರೈತರು ಮೇ ಮಾಸಾಂತ್ಯದಲ್ಲಿ ಭತ್ತ ಹಾಗೂ ಗೋವಿನಜೋಳ ಒಣ ಬಿತ್ತನೆ ಮಾಡುತ್ತಾರೆ. ಜೂನ್ನಲ್ಲಿ ಮುಂಗಾರು ಮಲೇ ಆರಂಭವಾಗುವುದರಿಂದ ಮುಂಚಿತವಾಗಿ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ವರ್ಷ ಮೇ ತಿಂಗಳಾಂತ್ಯದಲ್ಲಿ ನಿರಂತರವಾಗಿ ಸುರಿದ ಮಳೆಗೆ ರೈತರು ತಮ್ಮ ಗದ್ದೆಗಳನ್ನು ಹಸನಾಗಿಸಿ ಬಿತ್ತನೆ ಮಾಡಲು ಪರದಾಡಿದರು. ಇದರಿಂದ ಬಿತ್ತನೆಯೂ ವಿಳಂಬವಾಯಿತು.
ಹೆಚ್ಚಾದ ತೇವಾಂಶ: ಜೂನ್ ಮೊದಲ ವಾರದಲ್ಲಿ ರೈತರು ಅವಸರವಾಗಿ ಬಿತ್ತನೆ ಮಾಡಿದರೂ ಭತ್ತ ಹಾಗೂ ಗೋವಿನಜೋಳ ಮೊಳಕೆಯೊಡೆದವು. ಮೂರ್ನಾಲ್ಕು ಎಲೆಗಳನ್ನು ಬಿಟ್ಟವು. ನಂತರ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಗೋವಿನಜೋಳದ ಬೆಳೆಗೆ ತೇವಾಂಶ ಹೆಚ್ಚಾಗಿ ಬೇರು ಕೊಳೆರೋಗ ಕಾಣಿಸಿಕೊಂಡಿದೆ. ತಗ್ಗು ಪ್ರದೇಶದಲ್ಲಿನ ಬಹುತೇಕ ಗೋವಿನಜೋಳ ಬೆಳೆಗಳಿಗೆ ಬೇರು ಕೊಳೆ ರೋಗಕ್ಕೆ ತುತ್ತಾಗಿವೆ. ಎತ್ತರ ಹಾಗೂ ಇಳಿಜಾರು ಪ್ರದೇಶಗಳಲ್ಲಿನ ಬೆಳೆಗಳು ಸದ್ಯದ ಮಟ್ಟಿಗೆ ಸುರಕ್ಷಿತವಾಗಿವೆ.
ಬೇಕಿದೆ ಬಿಸಿಲು ವಾತಾವರಣ: ಗೋವಿನಜೋಳ ಬೆಳೆಗೆ ಸದ್ಯ ಹತ್ತಾರು ದಿನಗಳ ಕಾಲ ಬಿಸಿಲಿನ ವಾತಾವರಣ ಬೇಕಾಗಿದೆ. ಬಿಸಿಲು ಬಿದ್ದರೆ ಮಾತ್ರ ಬೇರು ಕೊಳೆ ರೋಗ ಕಾಣಿಸಿಕೊಂಡಿರುವ ಗೋವಿನಜೋಳ ಬೆಳೆಯಲ್ಲಿ ಸ್ವಲ್ಪ ಪ್ರಮಾಣದ ಬೆಳೆಯನ್ನಾದರೂ ರಕ್ಷಣೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಮಳೆ ಕಡಿಮೆಯಾದ ನಂತರ ಮರುಬಿತ್ತನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂಬುದು ರೈತರು ಅಳಲು.
ತಾಲೂಕಿನಲ್ಲಿ ಗೋವಿನಜೋಳ ಬೆಳೆಯೂ 15 ರಿಂದ 20 ದಿನದ ಬೆಳೆಯಿದ್ದು, ನೀರು ನಿಂತ ಹಾಗೂ ತಗ್ಗು ಪ್ರದೇಶಗಳಲ್ಲಿ ಗೋವಿನಜೋಳದ ಬೆಳೆಗೆ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಯೂ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ರೈತರು ಗದ್ದೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ನೀರಲ್ಲಿ ಕರಗುವ 19.19.19 ರಾಸಾಯನಿಕ ಗೊಬ್ಬರ ಸಿಂಪಡಣೆ ಮಾಡಬೇಕು. | ಕೆ.ಎನ್. ಮಹಾರೆಡ್ಡಿ ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ