

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.25 ರಿಂದ ಮಾ.2ರವರೆಗೆ ಮಹಾಶಿವರಾತ್ರಿ ಹಾಗೂ ಮಾ.27 ರಿಂದ 31ರವರೆಗೆ ಯುಗಾದಿ ಜಾತ್ರೆ ಜರುಗಲಿದ್ದು, ಈ ದಿನಗಳಂದು ಭಕ್ತರಿಗೆ ಕೊಠಡಿಗಳು ಲಭ್ಯವಿರುವುದಿಲ್ಲ ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ತಿಳಿಸಿದ್ದಾರೆ.
ಈ ಸಂದರ್ಭಗಳಲ್ಲಿ ರಾಜ್ಯದ ವಿವಿಧೆಡೆ ಹಾಗೂ ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮ.ಬೆಟ್ಟಕ್ಕೆ ಆಗಮಿಸುತ್ತಾರೆ. ಹಾಗೆಯೇ ಶ್ರೀ ಕ್ಷೇತ್ರದಲ್ಲಿ ಕುಟೀರವನ್ನು ನಿರ್ಮಿಸಿರುವ ಸ್ವಂತ ದಾನಿಗಳು ಆಗಮಿಸಿ ಕೊಠಡಿಯನ್ನು ಕಾಯ್ದಿರಿಸಿಕೊಳ್ಳುತ್ತಾರೆ. ಪ್ರಾಧಿಕಾರದಿಂದ ನಿರ್ಮಿಸಿರುವ ಕೊಠಡಿಗಳನ್ನು ಜಾತ್ರೆಯ ಭದ್ರತೆಗೆ ಆಗಮಿಸುವ ಪೊಲೀಸ್, ಆರೋಗ್ಯ, ಅಬಕಾರಿ, ಸೆಸ್ಕ್, ಅಗ್ನಿಶಾಮಕ, ಸಾರಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಹಾಗೂ ಪುರಸಭೆ, ನಗರಸಭೆಯ ಸ್ವಚ್ಛತಾ ಸಿಬ್ಬಂದಿಗೆ, ಗಣ್ಯ, ಅತಿ ಗಣ್ಯ ವ್ಯಕ್ತಿಗಳಿಗೆ ಹಾಗೂ ಸ್ವೀಕೃತವಾದ ಶಿಫಾರಸ್ಸು ಪತ್ರಗಳನ್ನು ತರುವ ವ್ಯಕ್ತಿಗಳಿಗೆ ಆದ್ಯತೆ ಮತ್ತು ಲಭ್ಯತೆ ಮೇರೆಗೆ ವಿತರಿಸಬೇಕಿದೆ. ಆದ್ದರಿಂದ ಭಕ್ತರು ಪ್ರಾಧಿಕಾರದ ಆಡಳಿತಕ್ಕೆ ಸ್ಪಂದಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.