

ನೊಣವಿನಕೆರೆ: ನೊಣವಿನಕೆರೆ ಶಾಲೆಯಲ್ಲಿ 1 ಕೋಟಿ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣ ಮಾಡುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ತುಂಬಾ ಅನುಕೂಲವಾಗಿದೆ. ಶಿಕ್ಷಕರು ಶ್ರಮದಿಂದ ಪ್ರತಿವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ಬೆಂಗಳೂರಿನ ಜಯನಗರದ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ನಿಂದ ತಾಲೂಕಿನ ನೊಣವಿನಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ (ಪ್ರಾಥಮಿಕ ವಿಭಾಗ) ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರು, ಎಸ್‌ಡಿಎಂಸಿ ಶಾಲೆಯ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ಬೋಧನೆಯಲ್ಲೂ ಗುಣಮಟ್ಟ ಕಾಪಾಡಿಕೊಂಡಿದ್ದಾರೆ. ಇಂತಹ ಶಾಲೆಯನ್ನು ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಆಯ್ಕೆ ಮಾಡಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಈ ಯೋಜನೆಗೆ ಅಗತ್ಯವಿರುವ ನಿಧಿಯನ್ನು ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ನ ದಾನಿಗಳಾದ ಅನುರಾಧಾ ಜಗದೀಶ್ ಮತ್ತು ಬಿ.ವಿ. ಜಗದೀಶ್ (ಅಮೆರಿಕ) ಹಾಗೂ ಸಂಜೀವ್ ಸರ್ದಾನ ಇವರಿಂದ ಸಂಗ್ರಹಿಸಿದ್ದು, 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಉದ್ದೇಶವಿದೆ ಎಂದರು.
ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಭಾರತದಲ್ಲಿ 10 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಉತ್ತರ ಪ್ರದೇಶ, ಝಾಖರ್ಂಡ್, ಬಿಹಾರ, ಮೇಘಾಲಯ, ಮಣಿಪುರದ 1,35.000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದೆ. ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಶಾಲೆಗಳ ಆಯ್ಕೆ ಪ್ರಕ್ರಿಯೆಯನ್ನು ಕಟ್ಟುನಿಟ್ಟಾದ ಮಾನದಂಡ ಅನುಸರಿಸುತ್ತದೆ. ಮೂಲ ತಂಡದ ಮಾರ್ಗದರ್ಶನದೊಂದಿಗೆ, ಇಂಜಿನಿಯರಿಂಗ್ ಮತ್ತು ಕಾನೂನು ಪರಿಶೀಲನೆಗಳನ್ನು ಒಳಗೊಂಡಿವೆ. ಪ್ರತಿ ಹಂತದಲ್ಲಿಯೂ ಗುಣಮಟ್ಟದ ಪರಿಶೀಲನೆಗಳು ಮತ್ತು ಸ್ಥಿರ ನಿರ್ಮಾಣ ಕ್ರಮಗಳೊಂದಿಗೆ ಯೋಜನೆಯನ್ನು ಸಂಪೂರ್ಣಗೊಳಿಸಿ ಹಸ್ತಾಂತರಿಸುವವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಆಡಳಿತ ವೆಚ್ಚಗಳು ಅತ್ಯಂತ ಕಡಿಮೆ ಇರುತ್ತವೆ ಮತ್ತು ಆರಂಭದಿಂದ ಅಂತ್ಯವರೆಗೂ ಸಂಪೂರ್ಣ ಪಾರದರ್ಶಕತೆ ಕಾಪಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ವೀರಣ್ಣಗೌಡ, ಸಲಹೆಗಾರ ಬಾಲಕೃಷ್ಣರಾವ್, ಕಾರ್ಯಾಚರಣೆಯ ಉಪಾಧ್ಯಕ್ಷ ಅಶ್ವಿನ್ ರಾವ್, ಇಂಜಿನಿಯರ್ ಶ್ರೀನಿವಾಸ್, ಐಐಎಮ್ ದರ್ಶನ್, ಗ್ರಾಪಂ ಅಧ್ಯಕ್ಷ ಧನಂಜಯ್, ಸದಸ್ಯರಾದ ಹರೀಶ್, ರಘುಚಂದನ್, ಎಸ್‌ಡಿಎಂಸಿ ಉಪಾಧ್ಯಕ್ಷ ದೊಡ್ಡರಂಗಪ್ಪ, ಪದವೀಧರ ಮುಖ್ಯ ಶಿಕ್ಷಕರಾದ ಎಸ್.ಆರ್.ಸುರೇಶ್, ಎಸ್‌ಡಿಎಂಸಿ ಸದಸ್ಯರು ಇದ್ದರು.