

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಳೆದ ಮೂರು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸಿ ಅದರಿಂದ ಸಂಗ್ರಹವಾಗುವ ಹಣವನ್ನು ಅನಾರೋಗ್ಯ ಪೀಡಿತರಿಗೆ, ನೊಂದವರಿಗೆ ನೆರವು ನೀಡುವ ಮೂಲಕ ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಕಾಪುವಿನ ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ಈ ಬಾರಿ ಬಡ ಕುಟುಂಬವೊಂದಕ್ಕೆ ಸೂರು ನಿರ್ಮಿಸಿಕೊಡಲು ಮುಂದಾಗಿದೆ.
ಉಡುಪಿ ಕಾಪುವಿನ ಪ್ರಸಿದ್ಧ ಯೂಟ್ಯೂಬರ್ ಶಟರ್‌ಬಾಕ್ಸ್ ಸಚಿನ್ ಶೆಟ್ಟಿ ಅವರ ನೇತೃತ್ವದ ತಂಡ ಮೂರು ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯಂತು ನಾನಾ ವೇಷ ತೊಟ್ಟು ಜನರಿಂದ ಹಣ ಸಂಗ್ರಹಿಸುತ್ತಾರೆ. ಸಂಗ್ರಹವಾಗುವ ಹಣವನ್ನು ಸಮಾಜದ ಅಶಕ್ತರಿಗೆ ಹಾಗೂ ನೊಂದವರಿಗೆ ನೀಡಿ ನೆರವಾಗಿದ್ದಾರೆ. 2023ರಲ್ಲಿ 10.81 ಲಕ್ಷ ರೂ. ಸಂಗ್ರಹಿಸಿ ಪುಟ್ಟ ಬಾಲಕಿಯೊಬ್ಬಳ ಚಿಕಿತ್ಸೆಗೆ ನೀಡಿದ್ದರು. 2024ರಲ್ಲಿ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ಸುಮಾರು 15 ಲಕ್ಷ ರೂ.ಗೂ ಅಧಿಕ ಮೊತ್ತದ ನೆರವು ನೀಡಿದ್ದರು. ಈ ಬಾರಿ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಬಡ ಕುಟುಂಬವೊಂದಕ್ಕೆ ಸುಮಾರು 15 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಗೆ ಯುವಕರ ತಂಡ ಕೈಹಾಕಿದೆ.
ದೈವ ನರ್ತನ ಕಾರ್ಯಕ ಮಾಡುವ ಕಾರ್ಕಳ ಪಳ್ಳಿ ಗ್ರಾಮದ ಬಾಬು ಅವರ ಜೋಪಡಿಯಂತಿರುವ ಮನೆ ಸಂಪೂರ್ಣ ಹಾಳಾಗಿದ್ದು ಗಾಳಿಮಳೆಗೆ ಬೀಳುವ ಹಂತದಲ್ಲಿದೆ. 90 ವರ್ಷದ ವಯೋವೃದ್ಧ ತಾಯಿ, ಪತ್ನಿ ಹಾಗೂ 6ನೇ ತರಗತಿಯ ಪುತ್ರನೊಂದಿಗೆ ವಾಸಿಸುತ್ತಿರುವ ಬಾಬು ಅವರಿಗೆ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಇನ್ನು ಮನೆ ದುರಸ್ತಿ ಮಾಡುವುದು ಕನಸಿನ ಮಾತಾಗಿದೆ. ಜೋರಾದ ಗಾಳಿ, ಮಳೆ ಬಂದಾಗ ಈ ಬಡಕುಟುಂಬ ನಿದ್ದೆ ಬಿಟ್ಟು ಜೀವಭಯದಲ್ಲೇ ದಿನ ಕಳೆಯುವಂತಾಗಿದೆ. ಬಡ ಕುಟುಂಬದ ಸಂಕಷ್ಟವನ್ನು ಅರಿತ ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ಅವರಿಗೊಂದು ಮನೆ ನಿರ್ಮಿಸಿಕೊಟ್ಟು ಸುಭದ್ರವಾದ ಆಶ್ರಯ ಕಲ್ಪಿಸಲು ಪಟತೊಟ್ಟಿದೆ.
ಸೆ.14ರಂದು ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು 30 ಯುವಕರಿರುವ ಶಟರ್ ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡ ಈ ಬಾರಿಯೂ ವಿಭಿನ್ನ ವೇಷ ತೊಟ್ಟು ಉಡುಪಿಯ ಮುಖ್ಯ ಪೇಟೆ, ಕೃಷ್ಣ ಮಠ, ಮಲ್ಪೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಗಿದೆ. ಸಚಿನ್ ಶೆಟ್ಟಿ ಜತೆಗೆ ಸ್ನೇಹಿತರಾದ ಅಭಿಷೇಕ್ ಶೆಟ್ಟಿ, ರೇಖನಾಥ್, ಜಗದೀಪ್ ಮೆಂಡನ್, ಸಿದ್ದಾರ್ಥ್ ಸಾಲಿಯಾನ್ ಬಣ್ಣಬಣ್ಣದ ಉಡುಗೆಯ ವೇಷ ತೊಟ್ಟು ನಗರದಲ್ಲಿ ಸಂಚರಿಸಿ ಹಣ ಸಂಗ್ರಹಿಸಲಿದ್ದಾರೆ. ಇಡೀ ದಿನದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಬಡಕುಟುಂಬಕ್ಕೆ ಮನೆ ಕಟ್ಟಿಕೊಡುವ ಸದುದ್ದೇಶ ಈ ತಂಡದ್ದು. ಅದಕ್ಕಾಗಿ ಶುಕ್ರವಾರ ಬಾಬು ಅವರ ನೂತನ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಶುಭಾರಂಭ ಮಾಡಿದ್ದಾರೆ.
ಜನರು ನೀಡುವ ಧನಸಹಾಯ ಈ ಬಡ ಕುಟುಂಬಕ್ಕೆ ಬೆಳಕು, ಭದ್ರತೆಯ ಆಸರೆ ನೀಡಬಲ್ಲದು. ಹೀಗಾಗಿ ದೊಡ್ಡ ಮಟ್ಟದಲ್ಲಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕನಸು ನನಸಾಗಿಸಲು ಸಹೃದಯಿ ದಾನಿಗಳ ಸಹಕಾರ ಬಯಸುತ್ತೇವೆ. ಸಚಿನ್ ಶೆಟ್ಟಿ, ಶಟರ್‌ಬಾಕ್ಸ್ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಮುಖ್ಯಸ್ಥ. https://www.vijayavani.net/vatu-puja-at-koteshwara-temple https://www.vijayavani.net/cultural-exchange-program-in-kundapur