

ಲಿಂಗಸುಗೂರು: ಛಾವಣಿ(ಲಿಂಗಸುಗೂರು ಪಟ್ಟಣ) ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಸೆ.19ರಂದು ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ಸುಮಂತ ಕನಕಗಿರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನ್‌ಲೈನ್ ಮಾರುಕಟ್ಟೆ ಯುಗದಲ್ಲಿ ಹಿಂದಿನಿಂದ ವ್ಯಾಪಾರ ಮಾಡಿಕೊಂಡು ಬಂದ ವ್ಯಾಪಾರಸ್ಥರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವ್ಯಾಪಾರ, ವಹಿವಾಟು ನಡೆಸಲು ಸಂಘಟಿತರಾಗುವುದು ಅನಿವಾರ್ಯವಾಗಿದೆ.
ಹಿರಿಯ ವ್ಯಾಪಾರಸ್ಥರ ಸಲಹೆ ಮೇರೆಗೆ ಸಂಘ ನೊಂದಣಿ ಮಾಡಿದ್ದು ಎಲ್ಲ ವ್ಯಾಪಾರಸ್ಥರು ಸಂಘಟಿತರಾಗಲು ಸೆ.19 ರಂದು ಬೆಳಗ್ಗೆ 10ಗಂಟೆಗೆ ರಾಘವೇಂದ್ರ ಸ್ವಾಮಿ ಮಠದಿಂದ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ಛಾವಣಿಯಲ್ಲಿ ಹೊರ ರಾಜ್ಯದಿಂದ ವ್ಯಾಪಾರಸ್ಥರು ಬಂದಿದ್ದಾರೆ. ಸ್ಥಳೀಯ ವ್ಯಾಪಾರಸ್ಥರಿಗೆ ಸಹಕಾರ ಸಿಗುತ್ತಿಲ್ಲ. ಸ್ಥಳೀಯ ವ್ಯಾಪಾರಿಗಳನ್ನು ಮೊದಲು ಬೆಳೆಸುವ ಅಗತ್ಯವಿದೆ. ಬೇರೆ ರಾಜ್ಯದ 72 ವ್ಯಾಪಾರಸ್ಥರಿದ್ದಾರೆ.
ಇಂಥವರು ಬಹಳ ದಿನದಿಂದ ವ್ಯಾಪಾರ ಮಾಡುತ್ತ ಬಂದಿದ್ದರಿಂದ ಇವರಿಗೆ ತೊಂದರೆಯಾಗುವುದಿಲ್ಲ. ಮುಂದೆ ಬೇರೆ ರಾಜ್ಯದವರಿಗೆ ಬರಲು ಅವಕಾಶ ಕೊಡಬಾರದೆಂದು ವ್ಯಾಪಾರಸ್ಥರು ತೀರ್ಮಾನಿಸಿದ್ದೇವೆ. ಸದ್ಯ ಇರುವ ಎಲ್ಲ ವ್ಯಾಪಾರಸ್ಥರು ಜಾತಿ-ಬೇಧವಿಲ್ಲದೆ ಸಂಘಟಿತರಾಗಲು ಕ್ಷೇಮಾಭಿವೃದ್ಧಿ ಸಂಘ ತಿರ್ಮಾನಿಸಿದೆ ಎಂದರು.
ಸಂಘದ ಉಪಾಧ್ಯಕ್ಷ ನಾಗಭೂಷಣ, ಸುಧೀರ ಕುಮಾರ ಶ್ರೀವಾತ್ಸವ, ಅಮರೇಶ ಗಂಭೀರಮಠ, ಪ್ರಧಾನ ಕಾರ್ಯದರ್ಶಿ ಸಿದ್ಧರಾಮೇಶ ಬಡಿಗೇರ, ಖಜಾಂಚಿ ನಿರ್ಮಲಾ, ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಭಾವಿ, ವೀರಣ್ಣ ಹುರಕಡ್ಲಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿವಕುಮಾರ ಸಾಲ್ಮನಿ, ಮಹಾಂತೇಶ ಅನ್ವರಿ ಇತರರಿದ್ದರು.