

ರೋಣ: ಸ್ತ್ರೀ ಸ್ವಾವಲಂಬನೆ ಮತ್ತು ಸ್ತ್ರೀಯರಲ್ಲಿ ಆರ್ಥಿಕ ಚೈತನ್ಯ ತುಂಬಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಹಿಳೆಯರನ್ನು ಒಗ್ಗೂಡಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಲ ಸೌಲಭ್ಯ ನೀಡಿ, ಅವರು ಸ್ವಂತ ಉದ್ಯೋಗ ಮಾಡಲು ಸಹಾಯ ಮಾಡಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ. ಜತೆಗೆ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕೆರೆ ಪುನಶ್ಚೇತನ, ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸುವುದು ಸೇರಿ ಹಲವು ಜನಪರ ಕಾರ್ಯಗಳಲ್ಲಿ ಸಂಸ್ಥೆಯು ತೊಡಗಿಸಿಕೊಂಡಿದೆ ಎಂದರು.
ರೋಣ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗಿರಿ, ಜೆ. ಚಂದ್ರಶೇಖರ, ಯೋಗೀಶ ಎ., ಎಸ್ಬಿಐ ಪ್ರಬಂಧಕ ಬಿ.ಕೆ. ಮರಡ್ಡಿ, ಅನ್ನದಾನೇಶ್ವರ ಪಪೂ ಕಾಲೇಜ್ ಕುಷ್ಟಗಿ ಶೈಕ್ಷಣಿಕ ಮಾರ್ಗದರ್ಶಕ ಮೃತ್ಯುಂಜಯ ದಡೇಸೂರಮಠ, ಮಹಾಬಲೇಶ್ವರ ಪಟಗಾರ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.