

ರೋಣ: ತಾಲೂಕಿನ ಬೆಳವಣಕಿ ಹಾಗೂ ಕೌಜಗೇರಿ ನಡುವಿನ ಹಳ್ಳದಲ್ಲಿ ಸಿಲುಕಿ ಮಂಗಳವಾರ ನಾಪತ್ತೆಯಾಗಿದ್ದ ಬೆಳವಣಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್ಎಂ ನರ್ಸ್ ಬುಧವಾರ ಈರುವೆ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಸಮ್ಮ ಗುರಿಕಾರ (35) ಮೃತ ಮಹಿಳೆ. ಬಸಮ್ಮ ಹಾಗೂ ಇಬ್ಬರು ಸಿಬ್ಬಂದಿ ಮಂಗಳವಾರ ಯಾ.ಸ. ಹಡಗಲಿ ಹಾಗೂ ಕೌಜಗೇರಿ ಗ್ರಾಮಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಬೆಳವಣಕಿಗೆ ಮರುಳುವಾಗ ಹಳ್ಳದ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಕೊಚ್ಚಿಕೊಂಡು ಹೋಗಿದ್ದರು. ಪುರುಷರಿಬ್ಬರು ಗಿಡ ಹಿಡಿದುಕೊಂಡು ಬಚಾವಾಗಿದ್ದಾರೆ. ಆದರೆ, ಬಸಮ್ಮ ನೀರಿನ ಸೆಳೆತಕ್ಕೆ ಸಿಲುಕಿ ಮೂರ್ನಾಲ್ಕು ಕಿ.ಮೀ. ದೂರ ತೇಲಿ ಹೋಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿವರೆಗೂ ಹುಡುಕಾಡಿದರೂ ಮಹಿಳೆ ಪತ್ತೆಯಾಗಲಿಲ್ಲ. ಕತ್ತಲಾಗಿದ್ದರಿಂದ ಮಂಗಳವಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಗಿನ ಕಾರ್ಯಾಚರಣೆಯಲ್ಲಿ ಈರುವೆ ಹಳ್ಳದ ದಡದಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದೆ. ಬಸಮ್ಮ ಗುರಿಕಾರ ದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಮೃತಪಟ್ಟ ಮಹಿಳೆಯ ಕಣ್ಣೀರ ಕಥೆ: ಎಎನ್ಎಂ ನರ್ಸ್ ಬಸಮ್ಮ ಅವರನ್ನು 10 ವರ್ಷದ ಹಿಂದೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಯುವಕನೊಂದಿಗೆ ಮದುವೆ ಮಾಡಲಾಗಿತ್ತು. ಆದರೆ, ಪತಿ, ಪತ್ನಿ ನಡುವೆ ಹೊಂದಾಣಿಕೆಯಾಗದ ಕಾರಣ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಬಸಮ್ಮ ಅವರು ರೋಣ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ವಾಸವಿದ್ದರು. ಪರಿಹಾರ ಎಷ್ಟು: ಸರ್ಕಾರಿ ನೌಕರರಾಗಿರುವ ಕಾರಣ ಅವರ ಸಂಬಳದ ಆಧಾರದ ಮೇಲೆ ಪರಿಹಾರ ಲಭಿಸುತ್ತದೆ. ಪ್ರಧಾನಮಂತ್ರಿ ಜೀವನ ಸುರಕ್ಷಾ ಅಡಿಯಲ್ಲಿ 80 ರಿಂದ 85 ಲಕ್ಷ ರೂ. ಪರಿಹಾರ ಲಭಿಸುತ್ತದೆ. ಅದರ ಜತೆಗೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರಧನ ಸಿಗಲಿದೆ. ಘಟನಾ ಸ್ಥಳಕ್ಕೆ ಡಿಎಚ್ಒ ಎಸ್.ಎಸ್. ನೀಲಗುಂದ, ಡಾ. ಎಚ್.ಎಲ್. ಗಿರಡ್ಡಿ, ತಹಸೀಲ್ದಾರ್ ನಾಗರಾಜ ಕೆ., ಟಿಎಚ್ಒ ಬಿ.ಎಸ್. ಭಜಂತ್ರಿ, ಕೆ.ಎ. ಹಾದಿಮನಿ, ಅನಿಲ ನವಲಗುಂದ, ಎಂ.ಎ. ಮುಲ್ಲಾ ಮತ್ತಿತರರು ಭೇಟಿ ನೀಡಿದರು.
ಕೆಲಸದ ನಿಮಿತ್ತ ಯಾ.ಸ. ಹಡಗಲಿಗೆ ತೆರಳಿದ್ದ ಆರೋಗ್ಯ ಇಲಾಖೆಯ ಉದ್ಯೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬುಧವಾರ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿಶೇಷವಾಗಿ ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆಯಡಿ ಅವರಿಗೆ ಪರಿಹಾರಧನ ಸಿಗುತ್ತದೆ. ರಾಜ್ಯ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಯತ್ನಿಸಲಾಗುವುದು. | ಎಸ್.ಎಸ್. ನೀಲಗುಂದ ಡಿಎಚ್ಒ