

ಮಡಿಕೇರಿ:
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸುಂಟಿಕೊಪ್ಪ ಸಂತ ಅಂತೋಣಿಯವರ ದೇವಾಲಯದ ಸಂಯುಕ್ತಾಶ್ರಯದಲ್ಲಿ ಇದೇ ತಿಂಗಳ 9 ರಿಂದ 11ರ ವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ವಿವಿಧ ಕ್ರೀಡಾಕೂಟ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸ್ನ್ ಪಿಂಟೋ ತಿಳಿಸಿದ್ದಾರೆ.
ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 14ನೇ ವರ್ಷದ ಪಂದ್ಯಾವಳಿಗೆ ಮೇ 9 ರಂದು ಚಾಲನೆ ದೊರೆಯಲಿದೆ. ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ, ಬೆಂಗಳೂರು ಮಹಾ ಧರ್ಮಪ್ರಾಂತ್ಯದ ವಿಶ್ರಾಂತ ಮಹಾಧರ್ಮಧ್ಯಕ್ಷ ಡಾ.ಬರ್ನಾಡ್ ಮೋರಾಸ್ ಆರ್ಶೀವಚನ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಧ್ವಜಾರೋಹಣವನ್ನು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ವಿಜಯ್ ಕುಮಾರ್ ನೆರವೇರಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯನ್ನು ವಿಲಿಯಂ ಮತ್ತು ನಾಪಂಡ ಮುತ್ತಪ್ಪ ಉದ್ಘಾಟಿಸಲಿದ್ದಾರೆ. ಜಾನ್ಸ್ನ್ ಪಿಂಟೋ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಧರ್ಮಗುರುಗಳು ಪಾಲ್ಗೊಳ್ಳುವರು.
ಮೇ 11 ರಂದು ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,
ವಿರಾಜಪೇಟೆ ವಲಯ ಶ್ರೇಷ್ಠ ಗುರು ಫಾ.ಜೇಮ್ಸ್ ಡಾಮಿನಿಕ್ ದಿವ್ಯ ಉಪಸ್ಥಿತರಿರಲಿದ್ದಾರೆ. ವಿರಾಜಪೇಟೆ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಫೈನಲ್ ಪಂದ್ಯ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪುರುಸ್ಕೃತ ಪೊಲೀಸ್ ಇಲಾಖೆಯ ರಾಜೇಶ್, ಎಂ.ಎಸ್.ಸಿ (ಸಿ.ಎಸ್) ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಶೈನಿ ಡಿಸೋಜ, ಪ್ರಗತಿಪರ ಕೃಷಿಕ ಎಸ್.ಎಂ.ಡಿಸಿಲ್ವ, ಎಂ.ಬಿ.ಬಿ.ಎಸ್ ನಲ್ಲಿ ಉನ್ನತ ಅಂಕ ಪಡೆದ ಡಾ.ಆನ್ ಲಿಷಾ, ಸಮಗ್ರ ಕೃಷಿಕ ಪಿ.ಎಂ. ಬಿಜು, ಸಸ್ಯಶಾಸ್ತçದಲ್ಲಿ ಪಿ.ಹೆಚ್.ಡಿ ಪಡೆದ ಡಾ.ನಿಲನ ಜೇಮ್ಸ್, ಟೆರೆಶಿಯನ್ ಪ್ರೆಸ್ ಮಾಲೀಕ ಪೌಲ್ ಕ್ಸೇವಿಯರ್, ನಾಟಿ ವೈದ್ಯ ಜಾನ್ ಲೋಬೋ, ಉರಗ ತಜ್ಞ ಪಿಯೂಸ್ ಪೆರೆರಾ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಅಸೋಸಿಯೇಷನ್‌ನ ಕಾರ್ಯಧ್ಯಕ್ಷ ವಿ.ಎ. ಲಾರೆನ್ಸ್, ಕ್ರೀಡಾ ಕೂಟ ಆಚರಣಾ ಸಮಿತಿ ಸಂಚಾಲಕ ಪಿ.ಎಫ್. ಸೆಬಾಸ್ಟಿನ್ ಮಾತನಾಡಿದರು.
ಅಸೋಸಿಯೇಷನ್ ಗೌರವಾಧ್ಯಕ್ಷ ಜೋಕಿಮ್ ವಾಸ್, ಮಹಿಳಾ ಘಟಕದ ಉಪಾಧ್ಯಕ್ಷೆ ಗ್ರೇಸಿ ಡೇವಿಡ್, ಕಾರ್ಯಕಾರಿ ಮಂಡಳಿ ಸದಸ್ಯ ಪಿ.ಎಂ. ಬಿಜು ಸುದ್ದಿಗೋಷ್ಠಿಯಲ್ಲಿ ಇದ್ದರು.