

ಬರಗೇನಹಳ್ಳಿ ಚಿಕ್ಕರಾಜು, ದಾಬಸ್‌ಪೇಟೆ: ವಸಂತ ಮಾಸದಲ್ಲಿ ಚಿಗುರುವ ಮಾವಿನ ಮರಗಳ ರಕ್ಷಣೆಗೆ ಸಿಂಪಡಿಸುವ ರಾಸಾಯನಿಕವು ಮರಗಳನ್ನು ಆಶ್ರಯಿಸಿರುವ ಹಕ್ಕಿ, ಗುಬ್ಬಚ್ಚಿ, ಗೊರವಂಕಗಳಿಗೆ ಪಾಲಿಗೆ ವಿಷಪ್ರಾಶನವಾಗಿ ಮಾರ್ಪಟ್ಟಿದೆ. ಹೌದು..! ರೈತರು ಅಧಿಕ ಸಲು, ರೋಗಬಾಧೆ ತಡೆಗೆ ಮಾವು ಬೆಳೆಗೆ ರಾಸಾಯನಿಕ ಸಿಂಪಡಿಸುತ್ತಿರುವುದು ಪಕ್ಷಿ ಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿದ್ದು, ಕೋಗಿಲೆ, ಕಾಗೆ, ಗುಬ್ಬಚ್ಚಿ, ಗೊರವಂಕ, ಬುಲ್ ಬುಲ್ ಸೇರಿ ಹತ್ತಾರು ಬಗೆಯ ಪಕ್ಷಿಗಳ ಚಿಲಿಪಿಲಿ ನಿಧಾನವಾಗಿ ಮಾಯವಾಗುತ್ತಿದೆ. ಬಹುತೇಕ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿರುವ ರಾಸಾಯನಿಕ ಸಿಂಪರಣೆ ಪರಿಣಾಮ ಮಣ್ಣು, ವಾಯು ಮಾಲಿನ್ಯವಲ್ಲದೆ ಸಲೂ ವಿಷಪೂರಿತವಾಗುತ್ತಿದೆ. ಅದರಲ್ಲೂ ಮಾವಿನಗಿಡಗಳಿಗೆ ಇತ್ತೀಚೆಗೆ ಹೆಚ್ಚಾಗಿ ರಾಸಾಯನಿಕ ಸಿಂಪಡಣೆ ಮಾಡುತ್ತಿರುವುದರಿಂದ ಮರಗಳಲ್ಲಿ ಆಶ್ರಯಪಡೆದ ಪಕ್ಷಿಸಂಕುಲ ಈಗ ಗೂಡು ಬಿಡುತ್ತಿದ್ದು, ವಿನಾಶದಂಚಿಗೆ ಸಾಗಿವೆ.
ವಿಶೇಷ ಪಕ್ಷಿ ಸಂತತಿ ಕ್ಷೀಣ: ಸೋಂಪುರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಮಾವು ಬೆಳೆದಿದ್ದು, ಮಾವಿನ ಗಿಡಗಳಿಗೆ ರೋಗ ಬಾರದಿರಲಿ, ಹೂವು ಉದುರದಿರಲಿ, ಚೆನ್ನಾಗಿ ಕಾಯಿ ಕಚ್ಚಲಿ ಎಂಬ ಕಾರಣಕ್ಕೆ ರೈತರು ಹಾಗೂ ಮಾವಿನ ತೋಟವನ್ನು ಗುತ್ತಿಗೆ ತೆಗೆದುಕೊಂಡ ವ್ಯಾಪಾರಸ್ಥರು ವಿವಿಧ ಕಂಪನಿಗಳ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದಾರೆ. ಸಲು ಉಳಿಸಿಕೊಳ್ಳಲು ರಾಸಾಯನಿಕ ಔಷಧ ಬಳಕೆ ಅನಿವಾರ್ಯವಾದರೂ ಅತಿಯಾದರೆ ಅಮೃತವೂ ವಿಷವಾಗುವಾಗ ರಾಸಾಯನಿಕವೆಂಬ ವಿಷದ ಅತಿ ಬಳಕೆ ಪಕ್ಷಿ ಸಂಕುಲಕ್ಕೆ ಸಹಜವಾಗಿ ಮಾರಕವಾಗಿದೆ. ರಾಸಾಯನಿಕ ಸಿಂಪಡಣೆ ಬಳಿಕ ಮರದಲ್ಲಿನ ಹಕ್ಕಿಗಳು ಸತ್ತು ಬಿದ್ದಿರುವ ದೃಶ್ಯಗಳು ಕಂಡುಬರುತ್ತಿವೆ.ಮರೆಯಾದ ಜೇನುಗೂಡು: ಮಾವಿನ ಮರಗಳು ಚಿಗುರಿದಾಗ, ಹೂವು ಬಿಟ್ಟಾಗ ಜೇನುನೊಣ ಗುಣುಗುತ್ತ ಕಿವಿಗೆ ಇಂಪು ನೀಡುತ್ತಿದ್ದವು. ಮಕರಂದ ಹೀರಿ, ಗಿಡಗಳಲ್ಲಿ ಯಥೇಚ್ಛವಾಗಿ ಜೇನುಗೂಡು ಕಟ್ಟುತ್ತಿದ್ದವು. ಒಂದು ಮಾವಿನ ತೋಟದಲ್ಲಿ ಹತ್ತಾರು ನೈಸರ್ಗಿಕ ಜೇನುಗೂಡುಗಳನ್ನು ಕಾಣಬಹುದಾಗಿತ್ತು. ಆದರೀಗ ಮಕರಂದ ಹೀರಲು ಜೇನುನೊಣಗಳು ಸುಳಿಯುತ್ತಿಲ್ಲ. ಸುಳಿದರೂ ಮಾವಿನಮರಗಳಲ್ಲಿ ಜೇನು ಗೂಡು ಕಟ್ಟುತ್ತಿಲ್ಲ.
ರಾಸಾಯನಿಕಗಳ ವಾಸನೆ ಹಾಗೂ ವಿಷಕಾರಕಗಳಿಂದ ಮಾವಿನ ಗಿಡಗಳತ್ತ ಪಕ್ಷಿಗಳು ಸುಳಿಯುತ್ತಿಲ್ಲ. ಸುಳಿದರೂ ಮೃತಪಡುತ್ತಿವೆ. ಪಕೃತಿ ಮಾನವನ ಸ್ವತ್ತಷ್ಟೇ ಅಲ್ಲ, ಎಲ್ಲ ಜೀವಸಂಕುಲಗಳ ಸ್ವತ್ತು ಎಂಬುದನ್ನು ಎಲ್ಲರೂ ಅರಿಯಬೇಕು. ಪಕ್ಷಿ ಸಂಕುಲದ ಉಳಿವಿಗೆ ಶ್ರಮಿಸಬೇಕು. - ರುದ್ರೇಶ್ ಪಕ್ಷಿ ಪ್ರೇಮಿ, ಗಂಗೇನಪುರ ಬೆಳೆಗಳಿಗೆ ರೋಗ ತಗಲುತ್ತದೆ ಎಂದು ರೈತರು ಕೀಟನಾಶಕ ಸಿಂಪಡಿಸುತ್ತಿದ್ದಾರೆ. ಅತಿಯಾಗಿ ರಾಸಾಯನಿಕ ಸಿಂಪಡಿಸಿದ ಬೆಳೆಯ ಸಲು (ಕಾಳು, ಹಣ್ಣು, ತರಕಾರಿ) ಸೇವಿಸುವುದರಿಂದಲೂ ಪಕ್ಷಿಗಳು ಸಾಯುತ್ತಿವೆ. ಹಾಗಾಗಿ ಸಾವಯವ ಕೃಷಿಗೆ ಒತ್ತು ನೀಡುವುದು ಅವಶ್ಯ. - ಬಾಲಕೃಷ್ಣ ಕೃಷಿಕ, ಚೆಲುವನಹಳ್ಳಿ