

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ವೃತ್ತಿ ಜೀವನ ರೂಪಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹುಬ್ಬಳ್ಳಿ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಹೇಳಿದರು.
ಕೆಎಲ್ಇ ಸಂಸ್ಥೆಯ ಹುಬ್ಬಳ್ಳಿಯ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕಾನೂನು ವೃತ್ತಿಯಲ್ಲಿ ತಂತ್ರಜ್ಞಾನದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಶೋಧನೆ, ಕರಡು ರಚನೆ, ಒಪ್ಪಂದ ನಿರ್ವಹಣೆ ಹಾಗೂ ವರ್ಚುವಲ್ ಕಾನ್ಪರೆನ್ಸ್ ಮೂಲಕ ವಾದ ಮಂಡಿಸಲು ತಂತ್ರಜ್ಞಾನವನ್ನು ಬಳಸಬಹುದು ಎಂದರು.
ಇತ್ತೀಚೆಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಪದೊನ್ನತಿ ಹೊಂದಿದ ಹಿನ್ನೆಲೆಯಲ್ಲಿ ರಾಜಶೇಖರ ತಿಳಗಂಜಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶಾರದಾ ಪಾಟೀಲ ಸ್ವಾಗತಿಸಿದರು. ಮಂಜುನಾಥ ಹಿರೇಮಠ ನಿರೂಪಿಸಿದರು. ಡಾ. ಎಸ್.ಎಂ. ಹುಲ್ಲೂರ ವಂದಿಸಿದರು.