‘ವಿಕಸಿತ ಭಾರತ’ಕ್ಕೆ ಮಾನದಂಡಗಳ ಪಾತ್ರ ಪ್ರಮುಖ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ

shobha K
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ವಿಕಸಿತ ಭಾರತ’ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಗುಣಮಟ್ಟ, ಮಾನದಂಡಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಶ್ವ ಮಾನದಂಡಗಳ ದಿನ ನಿಮಿತ್ತ ಭಾರತೀಯ ಮಾನಕ್ ಬ್ಯುರೋ (ಬಿಐಎಸ್) ಬೆಂಗಳೂರು ಶಾಖೆ ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೆ.ಎನ್. ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೈಗಾರಿಕಾಗಳ ಬೆಳವಣಿಗೆ ವೇಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳ ಜಾಗತಿಕ ಸ್ಪರ್ಧೆ ಹೆಚ್ಚಿಸಲು, ಗ್ರಾಹಕರ ಹಿತಾಸಕ್ತಿ ಕಾಪಾಡಲು ಗುಣಮಟ್ಟದ ಮೂಲಸೌಕರ್ಯ ಅಗತ್ಯವಿದೆ. ಉತ್ಪಾದನೆ, ವ್ಯಾಪಾರ ಮತ್ತು ನಾವೀನ್ಯತೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದ ನಾಯಕನ್ನಾಗಿಸಲು ನಿರ್ದಿಷ್ಟ ಮಾನದಂಡಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಲಹೆ ನೀಡಿದರು.

ಸಂಸದ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಸಾಧಿಸಲು, ಸಾರ್ವಜನಿಕ ಆರೋಗ್ಯ ಮತ್ತು ಯೋಗಕ್ಷೇಮ ಖಚಿತ, ಆರೋಗ್ಯ ರಕ್ಷಣೆ, ಸಂಶೋಧನೆ, ಉತ್ಪಾದನೆಯಂತಹ ವೈವಿಧ್ಯಮಯ ವಲಯದಲ್ಲಿ ಗುಣಮಟ್ಟದ ಮಾನದಂಡ ಅಳವಡಿಸಿಕೊಳ್ಳಬೇಕು. ಪ್ರಮಾಣೀಕರಣವು ದಕ್ಷತೆ ಮತ್ತು ಸುರಕ್ಷತೆ ಹೆಚ್ಚಿಸುವುದಲ್ಲದೆ ನಾವೀನ್ಯತೆ ಮತ್ತು ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ವಿಶೇಷವಾಗಿ ವೈದ್ಯಕೀಯ ತಂತ್ರಜ್ಞಾನ, ರೋಗನಿರ್ಣಯ ಇತ್ಯಾದಿ ಕ್ಷೇತ್ರಗಳಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.

ವಿಜ್ಞಾನಿ ಡಾ.ದಂಡಮುಡಿ ಉಷಾರಾಣಿ ಅವರು ಆಹಾರ ಸುರಕ್ಷತಾ ಮಾನದಂಡಗಳ ಮಹತ್ವ ಬಗ್ಗೆ ವಿಚಾರ ಮಂಡಿಸಿದರು. ಬಿಐಎಸ್ ಬೆಂಗಳೂರು ಶಾಖೆ ನಿರ್ದೇಶಕಿ ಸುಷ್ಮಾರಾವ್, ಉಪ ಮಹಾನಿರ್ದೇಶಕಿ ಡಾ.ಮೀನಾಕ್ಷಿ ಗಣೇಶನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net