

ಹುಬ್ಬಳ್ಳಿ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಗದಗ ರಸ್ತೆಯ ರೈಲ್ ಸೌಧದಲ್ಲಿ ಗುರುವಾರ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಶ್ರೀವಾಸ್ತವ, ಈ ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಮುನ್ನಡೆಸುವಲ್ಲಿ ನೈಋತ್ಯ ರೈಲ್ವೆ ಪ್ರಮುಖ ಪಾತ್ರ ವಹಿಸಿದೆ ಎಂದರು.
2023-24ರ ಆರ್ಥಿಕ ವರ್ಷದಲ್ಲಿ ಇದುವರೆಗೆ 29 ಕಿ.ಮೀ ಹೊಸ ಮಾರ್ಗಗಳು ಮತ್ತು 61 ಕಿ.ಮೀ ಜೋಡಿ ಮಾರ್ಗಗಳನ್ನು ನಿಯೋಜಿಸಲಾಗಿದೆ. ಇದೇ ಅವಧಿಯಲ್ಲಿ 86 ಸೇತುವೆಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ ಮತ್ತು 245 ಟ್ರಾ್ಯಕ್ ಕಿ.ಮೀ.ಗೂ ಹೆಚ್ಚು ನವೀಕರಿಸಲಾಗಿದೆ. 46,869 ಕೋಟಿ ರೂ.ಗಳ ಹೂಡಿಕೆಯೊಂದಿಗೆ 2,096 ಕಿ.ಮೀ ವ್ಯಾಪ್ತಿಯ ಅಂತಿಮ ಸ್ಥಳ ಸಮೀಕ್ಷೆ ಯೋಜನೆಗಳನ್ನು 2023-24ರಲ್ಲಿ ಮಂಜೂರು ಮಾಡಲಾಗಿದೆ, ಇದು ರೈಲ್ವೆ ಜಾಲದ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸುವ ನಮ್ಮ ಸಮರ್ಪಣೆಯ ಪ್ರಾಮುಖ್ಯತೆ ತೋರಿಸುತ್ತದೆ ಎಂದು ಹೇಳಿದರು.
ಪ್ರಯಾಣಿಕರ ಆದಾಯದಲ್ಲಿ ನೈಋತ್ಯ ರೈಲ್ವೆ 1,077 ಕೋಟಿ ರೂ.ಗಳನ್ನು ಸಾಧಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6.47 ರಷ್ಟು ಹೆಚ್ಚಳವಾಗಿದೆ. ಇದೇ ಜುಲೈನಲ್ಲಿ 286.3 ಕೋಟಿ ರೂ.ಗಳ ಅತ್ಯುತ್ತಮ ಮಾಸಿಕ ಪ್ರಯಾಣಿಕರ ಆದಾಯ ದಾಖಲಾಗಿದೆ. ಇದು ನೈಋತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು. ಇದೇ ಮಾರ್ಚ್ನ ಒಂದೇ ದಿನದಲ್ಲಿ 4,174 ಸರಕು ಘಟಕಗಳನ್ನು ಲೋಡ್ ಮಾಡುವ ಮೂಲಕ ದಾಖಲೆಯನ್ನು ಸ್ಥಾಪಿಸಿದ್ದಾಗಿ ತಿಳಿಸಿದರು.
2023-24ರ ಆರ್ಥಿಕ ವರ್ಷದಲ್ಲಿ ಇದುವರೆಗೆ ನೈಋತ್ಯ ರೈಲ್ವೆ 20.69 ಲಕ್ಷ ರೂ. ಮೌಲ್ಯದ ಕದ್ದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಂಡಿದೆ. ರೈಲ್ವೆ ಕಾಯ್ದೆಯಡಿ 16,057 ಪ್ರಕರಣಗಳನ್ನು ದಾಖಲಿಸಿದೆ ಮತ್ತು 44.52 ಲಕ್ಷ ಮೌಲ್ಯದ 1,383 ಲೈವ್ ಕಾಯ್ದಿಸಿದ ಟಿಕೆಟ್ಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು.
ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳಿಗೆ ಹೊಸದಾಗಿ ಖರೀದಿಸಿದ 9 ರಾಯಲ್ ಎನ್ಫಿಲ್ಡ್ ಬೈಕ್ಗಳಿಗೆ ಇದೇ ಸಂದರ್ಭದಲ್ಲಿ ಅರವಿಂದ ಶ್ರೀವಾಸ್ತವ ಅವರು ಹಸಿರು ನಿಶಾನೆ ತೋರಿಸಿದರು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.