

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ, ಸಾಹಿತ್ಯಕ್ಕೆ ಹೆಸರಾದ ಧಾರವಾಡದಲ್ಲಿ ರಂಗಾಯಣವು ನಾಟಕಗಳ ಮೂಲಕ ಮನರಂಜನೆಯೊಂದಿಗೆ ಜೀವನದ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಹೇಳಿದರು.
ರಂಗಾಯಣವು ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗ ತಂಡಗಳ ಸಹಯೋಗದಲ್ಲಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳಿಯ ತಂಡಗಳಿಂದ ಏರ್ಪಡಿಸಿರುವ ರಂಗಾಯಣ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಿತ್ಯದ ಜಂಜಾಟದಲ್ಲಿ ಕಳೆದು ಹೋಗುತ್ತಿರುವ ಜನರಿಗೆ ವಿನೂತನ, ವಿಭಿನ್ನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮನರಂಜನೆ ನೀಡುತ್ತಿದೆ. ನಾಟಕಗಳು ಮನರಂಜನೆಯೊಂದಿಗೆ ಆದಾಯದ ಮೂಲವೂ ಆಗಿದೆ. ಸಕ್ರಿಯವಾಗಿ ಜೀವನ ನಡೆಸಲು ನಾಟಕಗಳು ಪ್ರೇರಣೆಯಾಗಿವೆ. ಉತ್ತಮ ಸಂದೇಶಗಳಿರುವ ನಾಟಕಗಳನ್ನು ಪ್ರದರ್ಶನ ಮಾಡುವ ಕಾರ್ಯವನ್ನು ರಂಗಾಯಣ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಮಾತನಾಡಿ, ರಂಗಾಯಣವು ಇಂದು ಹಲವಾರು ಸೃಜನಾತ್ಮಕ ನಿರ್ದೇಶಕರು, ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ. ಇದೇ ರೀತಿ ರಂಗಾಯಣ ಅನೇಕ ಯೋಜನೆಗಳ ಮೂಲಕ ರಂಗಭೂಮಿ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು.
ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ನಂತರ ಅಂಗುಲಿಮಾಲ ದೊಡ್ಡಾಟ ಪ್ರಸಂಗವನ್ನು ಹುಬ್ಬಳ್ಳಿ ಜನಪದ ಕಲಾಬಳಗ ಟ್ರಸ್ಟ್ನ ತಂಡ ಪ್ರಸ್ತುತಪಡಿಸಿತು.