ಮಾತೃಭಾಷೆ ಕಲಿಕೆಯಲ್ಲಿ ಪಾಲಕರ ಪಾತ್ರ ಮಹತ್ವ

29 TKE 1,1(1)
Published on

ತರೀಕೆರೆ: ಮಕ್ಕಳ ಮಾತೃ ಭಾಷೆ ಕಲಿಕೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಲಕ್ಕವಳ್ಳಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಪಾ ಹೋಬಳಿ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಎಲ್ಲಾ ಚಟುವಟಿಕೆ ಗಮನಿಸುತ್ತ ಭಾವನೆಗಳೊಂದಿಗೆ ವರ್ತಿಸುವ ತಾಯಿ, ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಭಾಷಾಭಿಮಾನ, ಸಂಸ್ಕಾರ ಬಿತ್ತುವ ಕೆಲಸ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಆವಿಷ್ಕಾರದಿಂದ ಇತರೆ ಭಾಷೆಗಳ ಮೊರೆ ಹೋಗುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಲಕ್ಕವಳ್ಳಿಯಲ್ಲಿ ಎಲ್ಲ ಧರ್ಮೀಯರು ನೆಲೆಸಿದ್ದರೂ, ಕನ್ನಡಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿ ನಮ್ಮ ನೆಲ ಜಲದ ಬಗ್ಗೆ ಗೌರವ ಹೊಂದಿರುವುದು ಭಾಷೆ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಸಾಹಿತ್ಯ ಮತ್ತು ಸಂಸ್ಕೃತಿ ಈ ನೆಲದ ಮೂಲ ಬೇರಾಗಿದ್ದು, ಇದನ್ನು ಪಸರಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ರೀತಿಯಲ್ಲಿ ಮಾಡುತ್ತಿದೆ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಅನ್ಯ ಭಾಷೆಯ ಪ್ರಭಾವ ಹೆಚ್ಚಾದರೂ,ನಾಡಿನಲ್ಲಿ ಕನ್ನಡವೇ ಸಾರ್ವಭೌಮವಾಗಿದೆ. ಕನ್ನಡ ಭಾಷೆ ಮತ್ತು ನಮ್ಮತನಕ್ಕೆ ಕುತ್ತು ಬಾರದಂತೆ ನೋಡಿಕೊಳ್ಳಬೇಕು ಎಂದರು.

ಕಸಾಪ ಲಕ್ಕವಳ್ಳಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷ ಸಿ.ಚಕ್ರವರ್ತಿ ಸೇರಿ ಹಲವರು ಸೇವಾ ದೀಕ್ಷೆ ಸ್ವೀಕರಿಸಿದರು. ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್, ತಾಪಂ ಮಾಜಿ ಸದಸ್ಯ ಅನ್ಬು, ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ಹಿರಿಯ ಸದಸ್ಯ ಬಿ.ಎಸ್.ಭಗವಾನ್, ಲಕ್ಕವಳ್ಳಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಸಿ.ಚಕ್ರವರ್ತಿ, ಪ್ರಮುಖರಾದ ದಾದಾಪೀರ್, ಮಹೇಶ್, ಎಚ್.ಟಿ.ತಿಪ್ಪೇಶಪ್ಪ, ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net