

ಹುಬ್ಬಳ್ಳಿ: ರಾಣೆಬೆನ್ನೂರು ಮೂಲದ ಇಲ್ಲಿಯ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ನ ಎಡಗೈ ಸ್ಪಿನ್ ಮಾಂತ್ರಿಕ ರೋಹಿತ್ ಕುಮಾರ ಎ.ಸಿ., ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
8 ವರ್ಷದಿಂದಲೂ ಇದೇ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದ ರೋಹಿತ್, 19, 23,25 ವರ್ಷದೊಳಗಿನ ತಂಡದಲ್ಲಿ ಆಟವಾಡಿ ಗಮನ ಸೆಳೆದಿದ್ದರು. 15ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಸಕ್ತಿ ಬೆಳೆಸಿಕೊಂಡಿದ್ದರು.
ಧಾರವಾಡ ಜೋನಲ್ನಲ್ಲಿ ಗೆದ್ದು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದರು. ಸ್ಪಿನ್ ಮೋಡಿ ಮೂಲಕ ವಿಕೆಟ್ಗಳನ್ನು ಧರೆಗುರುಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವವಿವರು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮಾಡುವುದರಲ್ಲೂ ಎತ್ತಿದ ಕೈ. ಈ ಪ್ರತಿಭೆ ರಣಜಿ ತಂಡಕ್ಕೆ ಆಯ್ಕೆಯಾಗಿರುವುದು ರಾಜ್ಯದ ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತಷ್ಟು ವಿಶ್ವಾಸ ಹೆಚ್ಚಿಸಿದೆ.
ಕ್ಲಬ್ ಅಧ್ಯಕ್ಷ ವೀರಣ್ಣ ಸವಡಿ ಮಾತನಾಡಿ, ‘ಕರ್ನಾಟಕ ರಣಜಿ ತಂಡಕ್ಕೆ ನಮ್ಮ ಕ್ಲಬ್ನಲ್ಲಿ ತರಬೇತಿ ಪಡೆದಿದ್ದ ರೋಹಿತ್ ಆಯ್ಕೆಯಾಗಿರುವುದು ಖುಷಿ ತಂದಿದೆ. ಈತನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ’ ಎಂದರು.
‘ವಿಜಯವಾಣಿ’ಯೊಂದಿಗೆ ಮಾತನಾಡಿದ ರೋಹಿತ್ಕುಮಾರ, ಇದು ನನಗೆ ಸಿಕ್ಕ ಬಹುದೊಡ್ಡ ವೇದಿಕೆ. ಮುಂದೊಂದು ದಿನ ಭಾರತ ತಂಡದಲ್ಲಿ ಆಟವಾಡುವ ವಿಶ್ವಾಸವಿದೆ ಎಂದರು.