

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಗೆ ಆಗಮಿಸಿರುವುದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ವರ್ಗಾವಣೆ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಸಿಎಂ ಬಿಎಸ್ವೈ ಭೇಟಿಗೆ ಕಾವೇರಿ ನಿವಾಸಕ್ಕೆ ರೋಹಿಣಿ ಸಿಂಧೂರಿ ಆಗಮಿಸಿದ್ದಾರೆ. ಸುಮಾರು ಅರ್ಧ ಗಂಟೆ ಸಿಎಂ ನಿವಾಸದಲ್ಲಿದ್ದ ರೋಹಿಣಿ ಸಿಂಧೂರಿ, ಸಿಎಂ ಬಿಎಸ್ವೈ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ವರ್ಗಾವಣೆ ವಿಚಾರದ ಬಗ್ಗೆ ಸಿಎಂ ಜೊತೆ ರೋಹಿಣಿ ಚರ್ಚೆ ಮಾಡಿದ್ದಾರೆನ್ನಲಾಗಿದೆ. ವರ್ಗಾವಣೆ ಆದೇಶ ತಡೆ ಕೋರಿ ಸಿಎಂ ಬಳಿ ಮನವಿ ಮಾಡಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಮೈಸೂರಿನಲ್ಲಿ ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಬಗ್ಗೆ ಸಿಎಂ ಬಳಿ ಸಿಂಧೂರಿ ಹೇಳಿಕೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದ್ದು, ವರ್ಗಾವಣೆ ಆದೇಶ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆದಾಗಿನಿಂದ ಜಿಲ್ಲೆಯ ಜನಪ್ರತಿನಿಧಿಗಳು ನಿರಂತರವಾಗಿ ಅವರ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದರು. ಎಲ್ಲ ಪಕ್ಷದ ನಾಯಕರುಗಳು ಪಕ್ಷಾತೀತವಾಗಿ ಸಿಂಧೂರಿ ಅವರನ್ನು ಟೀಕಿಸಿದ್ದರು. ಇದರ ನಡುವೆ ಭೂಮಾಪಿಯಗೆ ಸಂಬಂಧಿಸಿದ ಕಡತಗಳನ್ನು ಸಿಂಧೂರಿ ಕೈಗೆತ್ತಿಕೊಂಡಾಗ ಅವರ ವಿರುದ್ಧ ರಾಜಕೀಯ ನಾಯಕರ ದಾಳಿ ಇನ್ನಷ್ಟು ತೀವ್ರವಾಯಿತು ಎಂದು ತಿಳಿದುಬಂದಿದೆ.
ಕರೊನಾ ನಿರ್ವಹಣೆ ಹಾಗೂ ಚಾಮರಾಜನಗರ ಆಕ್ಸಿಜನ್ ದುರಂತದ ಹೆಸರಲ್ಲಿ ರೋಹಿಣಿ ಅವರ ವಿರುದ್ಧ ಇಡೀ ರಾಜಕೀಯ ನಾಯಕರು ಎದುರಾಗಿ ನಿಂತರು. ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆಯ ಆಯಕ್ತೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಯಿತು. ರೋಹಿಣಿ ಸಿಂಧೂರಿ ಕಿರುಕುಳ ತಾಳಲಾರದೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಆರೋಪಿಸಿದ್ದರು. ಇದರಿಂದ ಸಿಂಧೂರಿ ವರ್ಗಾವಣೆಗೆ ಒತ್ತಡ ಹೆಚ್ಚಾಗಿತ್ತು. ಶಿಲ್ಪಾ ನಾಗ್ ಮತ್ತು ಸಿಂಧೂರಿ ನಡುವೆ ನಿರಂತರ ಕಿತ್ತಾಟ ನಡೆಯಿತು.
ಕೊನೆಗೆ ಅವರಿಬ್ಬರನ್ನು ವರ್ಗಾವಣೆ ಮಾಡಿರುವ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ಹಾಗೂ ಶಿಲ್ಪಾ ನಾಗ್ ಅವರನ್ನು ಆರ್ಡಿಪಿಆರ್ ನಿರ್ದೇಶಕರಾಗಿ ವರ್ಗಾವಣೆ ಮಾಡುವ ಮೂಲಕ ಸರ್ಕಾರ ಒಟ್ಟು ಆರು ಐಎಎಸ್ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಿದೆ.
ಇನ್ನು ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಲಕ್ಷ್ಮೀಕಾಂತ್ ರೆಡ್ಡಿ ವರ್ಗಾವಣೆಗೊಂಡಿದ್ದಾರೆ. ಡಾ. ಬಗಾದಿ ಗೌತಮ್ ಇದಕ್ಕೂ ಮೊದಲು ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಹಾಗೂ ಲಕ್ಷ್ಮೀಕಾಂತ್ ರೆಡ್ಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. (ದಿಗ್ವಿಜಯ ನ್ಯೂಸ್)