

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಡೆಂಘೆ, ಚಿಕೂನ್‌ಗುನ್ಯಾದಂಥ ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾದ್ಯಂತ ನಿರಂತರವಾಗಿ ಜಾಗೃತಿ ಕಾರ್ಯಾಗಾರ, ಬೀದಿನಾಟಕ, ಕರಪತ್ರ ಹಂಚಿಕೆ ಮತ್ತಿತರ ಕಾರ್ಯಕ್ರಮ ರೂಪಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆಯ ಸಹಕಾರ ಕೋರಿದ್ದು, ಶಿಕ್ಷಕರಿಗಾಗಿಯೇ ಪ್ರತ್ಯೇಕ ಕಾರ್ಯಾಗಾರ ಆರಂಭಿಸಿದೆ.
ಜಿಲ್ಲೆಯ 105 ಪಂಚಾಯಿತಿ, ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದು, ಇದರ ಜತೆಗೆ ಆಯಾ ವ್ಯಾಪ್ತಿಯ ಶಾಲೆಗಳ ಒಬ್ಬ ಬೋಧಕ ಸಿಬ್ಬಂದಿಯನ್ನು ಆಯ್ಕೆ ಮಾಡಿ ಹತ್ತಾರು ಶಾಲಾ-ಕಾಲೇಜುಗಳ ಸಿಬ್ಬಂದಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಕಾರ್ಯಾಗಾರದಲ್ಲೂ ಜಿಲ್ಲಾಮಟ್ಟದ ಆರೋಗ್ಯಾಧಿಕಾರಿ, ಸೊಳ್ಳೆಗಳಿಂದ ಹರಡುವ ರೋಗಗಳು, ಅವುಗಳ ನಿಯಂತ್ರಣ ಕುರಿತು ಶಿಕ್ಷಕರಿಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಈ ಕಾರ್ಯಾಗಾರದ ಮಾಹಿತಿಯನ್ನು ಆಯಾ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ತಿಳಿಸುವ ಕೆಲಸ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಪ್ರಾರ್ಥನೆ ಸಮಯದಲ್ಲಿ ಅರಿವು:
ಆಯಾ ಶಾಲೆಗಳಲ್ಲಿ ಪ್ರತಿದಿನ ತರಗತಿ ಆರಂಭವಾಗುವ ಮುನ್ನ ಪ್ರಾರ್ಥನೆ ಸಮಯದಲ್ಲೇ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ 5ರಿಂದ 10 ನಿಮಿಷದ ಅವಧಿಯಲ್ಲಿ ಮಾಹಿತಿ ನೀಡುವ ಯೋಜನೆ ರೂಪಿಸಲಾಗಿದೆ. ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರು ಈ ಬಗ್ಗೆ ಪ್ರತಿದಿನ ಒಂದೊಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಲಾರ್ವಾ ಸಮೀಕ್ಷೆ ನಡೆಸುವುದು ಹೇಗೆ, ಸೊಳ್ಳೆಗಳ ನಿಯಂತ್ರಣ, ರೋಗ ಲಕ್ಷಣಗಳೇನು, ಸೋಂಕು ತಗುಲಿದ ವ್ಯಕ್ತಿಗೆ ಮಾಡಬೇಕಾದ ಪ್ರಥಮ ಚಿಕಿತ್ಸೆ, ನೆರೆ-ಹೊರೆಯವರಿಗೆ ಅರಿವು… ಹೀಗೆ ಕಾರ್ಯಾಗಾರದಲ್ಲಿ ನೀಡಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಡೆಂಘೆ ಪ್ರಕರಣ: ದೊಡ್ಡಬಳ್ಳಾಪುರ ತಾಲೂಕು ಮೇಳೆಕೋಟೆ ಪಂಚಾಯಿತಿಯ ಬೀಡಿಕೆರೆ ಗ್ರಾಮದಲ್ಲಿ 7 ವರ್ಷದ ಬಾಲಕಿ ತೀವ್ರ ಜ್ವರದಿಂದ ಇತ್ತೀಚೆಗೆ ಮೃತಪಟ್ಟಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಕೊನೆಯುಸಿರೆಳೆದಿದ್ದಳು, ಇದನ್ನು ಜಿಲ್ಲಾ ಆರೋಗ್ಯ ಇಲಾಖೆ ಶಂಕಿತ ಡೆಂಘೆ ಪ್ರಕರಣ ಎಂದು ವರದಿ ನೀಡಿದೆ. ಈ ಪ್ರಕರಣ ಬಳಿಕ ಜಿಲ್ಲೆಯಲ್ಲಿ ಡೆಂಘೆ ಬಗ್ಗೆ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದು, ಆರೋಗ್ಯ ಇಲಾಖೆಯೂ ಜಾಗೃತಿ ಕಾರ್ಯಕ್ರಮ ಚುರುಕುಗೊಳಿಸಿದೆ.
ಎಚ್ಚರಿಕೆ ಏನು?: ಮಲೇರಿಯಾ, ಡೆಂಘೆ ಜ್ವರ ಸೋಂಕಿತ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಇಂಥ ಸೊಳ್ಳೆಗಳು ಮನೆ ಒಳಗಡೆ ಹಾಗೂ ಸುತ್ತಮುತ್ತ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ನೀರು ಶೇಖರಿಸುವ ಡ್ರಮ್, ತೊಟ್ಟಿ ಮತ್ತಿತರ ಪರಿಕರಗಳನ್ನು ಭದ್ರವಾಗಿ ಮುಚ್ಚಬೇಕು, ವಾರಕ್ಕೊಮ್ಮೆ ನೀರು ಖಾಲಿ ಮಾಡಿ ಒಣಗಿಸಿ ನಂತರ ಬಳಸಬೇಕು, ಸೊಳ್ಳೆ ನಿರೋಧಕ ಉಪಕರಣಗಳನ್ನು ಬಳಸಬೇಕು. ಯಾವುದೇ ರೋಗ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ನಿಯಂತ್ರಣ, ರಕ್ಷಣೆ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆಯ ಸಹಕಾರವನ್ನೂ ಪಡೆಯಲಾಗಿದೆ. ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ ಅದನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ಯಾಗಾರ ನಡೆಸಲಾಗುತ್ತಿದೆ.