

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರೋಬಾಟಿಕ್ ತಂತ್ರಜ್ಞಾನ ಬಳಸಿ ಎರಡು ಕ್ಯಾನ್ಸರ್ ಸರ್ಜರಿ ಯಶಸ್ವಿಗೊಳಿಸಲಾಗಿದೆ ಎಂದು ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕರ್ನಲ್ ಎಂ. ದಯಾನಂದ ತಿಳಿಸಿದರು.
ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನನಾಳ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 62 ಮತ್ತು 70 ವರ್ಷದ ಇಬ್ಬರು ರೋಗಿಗಳಿಗೆ ಸುಮಾರು 8 ಗಂಟೆಗಳ ಕಾಲ ಚಿಕಿತ್ಸೆ ನೆರವೇರಿಸಲಾಗಿದೆ. ಬೆಂಗಳೂರು, ಮಂಗಳೂರು ಹೊರತುಪಡಿಸಿದರೆ ನಮ್ಮ ಆಸ್ಪತ್ರೆಯಲ್ಲಿ ರೋಬಾಟಿಕ್ ತಂತ್ರಜ್ಞಾನ ಬಳಸಿ ಕಾನ್ಸರ್ ಶಸ್ತ್ರ ಚಿಕಿತ್ಸೆ ಮಾಡಿ, ಹೊಸ ಮೈಲುಗಲ್ಲು ಸ್ಥಾಪಿಸಿದೆ. ಭಾರತದಲ್ಲಿಯೇ ತಯಾರಿಸಿದ ಎಸ್‌ಎಸ್‌ಐ ತಂತ್ರಜ್ಞಾನ ಸರ್ಜಿಕಲ್ ರೋಬಾಟಿಕ್ ಇದಾಗಿದ್ದು, ಅತ್ಯಂತ ನಿಖರ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಸಹಕಾರಿಯಾಗಿದೆ. ಈ ತಂತ್ರಜ್ಞಾನದಿಂದ ಕಾನ್ಸರ್ ಶಸ್ತ್ರ ಚಿಕಿತ್ಸೆ ಒಂದೇ ಅಲ್ಲ, ಇತರ ಶಸ್ತ್ರಚಿಕಿತ್ಸೆಗಳನ್ನೂ ನೆರವೇರಿಸಲಾಗುತ್ತದೆ. ಆಸ್ಪತ್ರೆಯ 30 ಜನ ವೈದ್ಯರಿಗೆ ರೋಬಾಟಿಕ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ಮಾಡುವ ತರಬೇತಿ ನೀಡಲಾಗಿದೆ ಎಂದರು.
ವೈದ್ಯ ವಿಜ್ಞಾನದ ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ಆಸ್ಪತ್ರೆ ಕೂಡ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ವೈದ್ಯಕೀಯ ವಿಜ್ಞಾನದಲ್ಲಿ ನಿಖರವಾದ ಶಸ್ತ್ರಚಿಕಿತ್ಸೆ ನೆರವೇರಿಸಲು ರೋಬಾಟಿಕ್ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಿದೆ. ಮೂರು ದಶಕಗಳ ಹಿಂದೆ ವೈದ್ಯ ವಿಜ್ಞಾನದ ತಂತ್ರಜ್ಞಾನಕ್ಕೆ ಪರಿಚಿತವಾದ ರೋಬಾಟಿಕ್ ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಅದ್ಭುತ ಕೊಡುಗೆ ನೀಡುತ್ತ ನಿರಂತರವಾಗಿ ಅಭಿವೃದ್ದಿಗೊಳ್ಳುತ್ತಿದೆ. ಇದರಿಂದ ವೈದ್ಯರು ಅತ್ಯಂತ ಕ್ಲಿಷ್ಟಕರ, ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಸಹಕಾರಿಯಾಗಲಿದೆ ಎಂದರು.
ಈಗಾಲೇ ರೊಬೊಟಿಕ್ ತಂತ್ರಜ್ಞಾನವನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಆರೋಗ್ಯ ಕ್ಷೇತ್ರದಲ್ಲೂ ವಿಶ್ವಾರ್ಹತೆ ಗಳಿಸುತ್ತಿದೆ. ರೋಬಾಟಿಕ್ ಶಸ್ತ್ರಚಿಕಿತ್ಸೆಯ ವಿಧಾನವು ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಲೆ ಇರುತ್ತದೆ. ಶಸ್ತ್ರಚಿಕಿತ್ಸಾ ಉಪಕರಣಗಳನ್ನು ವೈದ್ಯರಿಗೆ ನೀಡುವುದು, ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ ರೋಬಾಟ್ ಎಂದರು.
ಕ್ಯಾನ್ಸರ್ ತಜ್ಞವೈದ್ಯ ಡಾ.ಮಹೇಶ ಕಲ್ಲೊಳ್ಳಿ ಮಾತನಾಡಿ, 3ಡಿ ತಂತ್ರಜ್ಞಾನ, ಹೈಡೆಫಿನೇಶನ್ ಕ್ಯಾಮರಾ ಹಾಗೂ ಅತ್ಯಾಧುನಿಕ ಉಪರಣಗಳನ್ನು ಹೊಂದಿರುವುದರಿಂದ ಶಸ್ತ್ರಚಿಕಿತ್ಸೆಯ ಸ್ಥಳವನ್ನು ನಿಖರವಾಗಿ ತಲುಪಿ ಶಸ್ತ್ರಚಿಕಿತ್ಸೆ ಸುಲಭವಾಗಿ ನೆರವೇರಿಸಲು ಸಹಕರಿಸುತ್ತದೆ. ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಸಣ್ಣ ರಂಧ್ರದ ಅಗತ್ಯವಿರುತ್ತದೆ. ಇದರಿಂದ ಸುತ್ತಲಿನ ಅಂಗಾಂಶಗಳಿಗೆ ಕಡಿಮೆ ತೊಂದರೆಯುಂಟಾಗುತ್ತದೆ. ರಕ್ತಸ್ರಾವ ಕಡಿಮೆಗೊಂಡು, ರೋಗಿಗಳು ಶೀಘ್ರವಾಗಿ ಗುಣಮುಖಗೊಳ್ಳುತ್ತಾರೆ. ಶಸ್ತ್ರಚಿಕಿತ್ಸಕರಿಗೆ ಸಾಂಪ್ರದಾಯಿಕ ಲ್ಯಾಪ್ರೋಸ್ಕೋಪಿಕ್ ಉಪಕರಣಕ್ಕಿಂತ ಹೆಚ್ಚು ಸಹಕಾರಿಯಾಗಿದೆ. ದೀರ್ಘಾವಧಿವರೆಗಿನ ಶಸ್ತ್ರಚಿಕಿತ್ಸೆಗಳನ್ನು ಅನಾಯಾಸವಾಗಿ ನೆರವೇರಿಸುವುದರಿಂದ ಶಸ್ತ್ರಚಿಕಿತ್ಸಕರ ದೈಹಿಕ ಒತ್ತಡ ಕಡಿಮೆ ಮಾಡಲಿದೆ ಎಂದರು.
ಕ್ಯಾನ್ಸರ್ ತಜ್ಞವೈದ್ಯ ಡಾ.ಕುಮಾರ ವಿಂಚುರಕರ ಮಾತನಾಡಿ, ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೋಬಾಟಿಕ್ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಸೋಂಕಿನ ಅಪಾಯ ಕಡಿಮೆಯಿದ್ದು, ಶೀಘ್ರ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ. ಅಲ್ಲದೆ ಲ್ಯಾಪ್ರೋಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸಾ ವಿಧಾನಗಳಿಗಿಂತ ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಆದ್ಯತೆಯನ್ನಾಗಿ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ವಿವರಿಸಿದರು. ರೋಬಾಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಅತಯ್ಯಂತ ಪರಿಣಾಮಕಾರಿ ಎಂದು ಕಂಡುಬಂದಿದೆ. ರೋಬಾಟಿಕ್ ಶಸ್ತ್ರಚಿಕಿತ್ಸೆಯು ಲ್ಯಾಪ್ರೋಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸೆ ಎರಡಕ್ಕೂ ಸೈ ಎನಿಸಿಕೊಂಡಿದೆ ಎಂದರು.
ಶಸ್ತ್ರಚಿಕಿತ್ಸೆಗೆ ಡಾ.ದಿವಾಕರ, ಡಾ.ರಾಹುಲ್ ಕಿನವಾಡೆಕರ ಅವರಿಗೆ ಅರಿವಳಿಕೆ ತಜ್ಞವೈದ್ಯ ಡಾ.ರಾಜೇಶ ಮಾನೆ ಸಹಕರಿಸಿದ್ದಾರೆ ಎಂದರು.