ಅತ್ಯಾಧುನಿಕ ರೊಬೊಟಿಕ್​ ಸರ್ಜರಿ ಸೌಲಭ್ಯ ಉದ್ಘಾಟನೆ

udp-14-kmc
Published on

ಉಡುಪಿ: ತಂತ್ರಜ್ಞಾನದಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಕಂಡುಬರುತ್ತಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಗಳು ಭಾರತದಲ್ಲೂ ಲಭ್ಯವಾಗುತ್ತಿರುವುದು ಸಂತಸಕರ ಸಂಗತಿ ಎಂದು ಒಲಿಂಪಿಕ್​ ಚಾಂಪಿಯನ್​ ಸೈನಾ ನೆಹ್ವಾಲ್​ ಹೇಳಿದರು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸುಧಾರಿತ ರೊಬೊಟಿಕ್​ ಸರ್ಜರಿ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕ್ರೀಡಾಪಟುಗಳಿಗೆ ಅನೇಕ ಅರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಬೆನ್ನು, ಭುಜದ ನೋವುಗಳು ಸಾಮಾನ್ಯವಾಗಿವೆ. ಕಾಲುಗಂಟಿನ ನೋವಿನಿಂದಾಗಿ ನಾನು ಆಟ ನಿಲ್ಲಿಸುವಂತಾಗಿದೆ. ಇದೆಲ್ಲವನ್ನೂ ಪರಿಹರಿಸಿಕೊಂಡು ಸಾಧನೆ ಮಾಡುವುದು ಸವಾಲಿನ ಕೆಲಸವಾಗಿದೆ. ಹೊಸ ಆವಿಷ್ಕಾರಗಳು ಅಥ್ಲೆಟಿಕ್ಸ್​ಗಳಿಗೆ ಅನುಕೂಲಕರವಾಗಿವೆ ಎಂದರು.

ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಅಧ್ಯಕ್ಷತೆ ವಹಿಸಿ, ಜಿಲ್ಲೆಯ ಜನರಿಗೆ ಸಮಗ್ರ ರೊಬೊಟಿಕ್​ ಸರ್ಜರಿ ಯೋಜನೆ ಪರಿಚಯವು ಕೇವಲ ತಂತ್ರಜ್ಞಾನದ ಉನ್ನತಿಕರಣ ಮಾತ್ರವಲ್ಲದೆ ಪ್ರತಿಯೊಂದು ಸಮುದಾಯಕ್ಕೂ ವಿಶ್ವ ದರ್ಜೆಯ ಆರೋಗ್ಯ ರಕ್ಷಣೆಯನ್ನು ತರುವ ನಮ್ಮ ಅಚಲ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಶಸ್ತ್ರ್ರಚಿಕಿತ್ಸಾ ಆಂಕೊಲಾಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಜಿಐ ಶಸ್ತ್ರಚಿಕಿತ್ಸೆ, ಒಬಿಜಿ, ಮೂತ್ರಶಾಸ್ತ್ರ ಮತ್ತು ಮೊಣಕಾಲು ಹಾಗೂ ಕೀಲು ಬದಲಿ ಕಾರ್ಯವಿಧಾನಗಳಲ್ಲಿ ನಿಖರತೆಯನ್ನು ಹೆಚ್ಚಿಸುವ ಮತ್ತು ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಸುಧಾರಿತ ತಂತ್ರಜ್ಞಾನವು ರೋಗಿಗಳ ಆರೈಕೆಯಲ್ಲಿ ಕ್ರಾಂತಿಯನ್ನುಂಟುಮಾಡಲಿದೆ ಎಂದರು.

ಸರ್ಜಿಕಲ್​ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಡಾ. ನವೀನ ಕುಮಾರ್​ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಹೆ ಸಹ ಕುಲಪತಿ ( ಆರೋಗ್ಯ ವಿಜ್ಞಾನ) ಡಾ. ಶರತ್​ ಕೆ. ರಾವ್​, ಕೆಎಂಸಿ ಮಣಿಪಾಲ ಕ್ಲಸ್ಟರ್​ ಸಿ ಓ ಓ ಡಾ. ಸುಧಾಕರ್​ ಕಂಟಿಪುಡಿ, ಕಸ್ತೂರ್ಬಾ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಮುಖ್ಯ ಅಧಿಕಾರಿ ಸಗೀರ್​ ಸಿದ್ದಿಕಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net