ಮೈಸೂರಿನಲ್ಲಿ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಅಳವಡಿಕೆ: ಸರ್ಜನ್ ಡಾ.ಎಂ.ವಿಜಯ ಕುಮಾರ್ ಮಾಹಿತಿ

Robotic Surgeon Press Conference Mandya
Published on

ಮಂಡ್ಯ: ಮೈಸೂರಿನ ಭಾರತ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಸಂಬಂಧಿಸಿದಂತೆ ಸುಧಾರಿತ ಡಾವಿನ್ಸಿ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಅನ್ನು ಪರಿಚಯಿಸಲಾಗಿದೆ ಎಂದು ಅಂಕೊಲಾಜಿಸ್ಟ್ ಮತ್ತು ರೋಬೊಟಿಕ್ ಸರ್ಜನ್ ಡಾ.ಎಂ.ವಿಜಯ ಕುಮಾರ್ ತಿಳಿಸಿದರು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಡಾವಿನ್ಸಿ ರೊಬೊಟಿಕ್ ಸರ್ಜಿಕಲ್ ಸಿಸ್ಟಮ್ ಪರಿಚಯಿಸಿರುವುದು ರೊಬೊಟಿಕ್ ಸರ್ಜರಿಯಲ್ಲಿ ಕ್ರಾಂತಿಕಾರಿಕ ಮೈಲಿಗಲ್ಲಾಗಿದೆ. ಈಗಾಗಲೇ ಇಪ್ಪತ್ತು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ರೋಬೊಟಿಕ್ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ. ಇದು ಮೈಸೂರಿನಲ್ಲಿ ಸುಧಾರಿತ ವೈದ್ಯಕೀಯ ತಂತ್ರಜ್ಞಾನದ ಬೆಳವಣಿಗೆ. ಅಂಕೋಲಾಜಿ, ಸ್ತ್ರೀರೋಗಶಾಸ್ತ್ರ, ಮೂತ್ರ ಕೋಶ ಮತ್ತು ಸಾಮಾನ್ಯ ಶಸ್ತ್ರ ಚಿಕಿತ್ಸೆಗೆ ಇದನ್ನು ಬಳಕೆ ಮಾಡಿಕೊಳ್ಳಲಾಗಿದೆ. ರೋಗಿಯ ಚೇತರಿಕೆ ಸಮಯ ಮತ್ತು ಫಲಿತಾಂಶವೂ ಗಮನಾರ್ಹವಾಗಿ ಸುರ್ಧಾರಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಅತ್ಯಾಧುನಿಕ ತಂತ್ರಜ್ಞಾನವು ಕ್ಯಾನ್ಸರ್ ರೋಗಿಗಳ ಜೀವನವನ್ನು ಪರಿವರ್ತಿಸುತ್ತಿದೆ. ಅಲ್ಲದೆ, ರೋಬೊಟಿಕ್ ಶಸ್ತ್ರಚಿಕಿತ್ಸೆಯು ನಿಖರತೆಯನ್ನು ಖಚಿತಪಡಿಸುತ್ತದೆ. ನೋವು, ರಕ್ತದ ನಷ್ಟ ಮತ್ತು ಚೇತರಿಕೆ ಸಮಯವನ್ನು ಕಡಿಮೆ ಮಾಡುತ್ತದೆ. ರೋಗಿಗಳು ತಮ್ಮ ದೈನಂದಿನ ಜೀವನಕ್ಕೆ ಬೇಗನೆ ಮರಳುವುದಕ್ಕೆ ಅನುವು ಮಾಡಿಕೊಡುತ್ತದೆ. ಮಂಡ್ಯ, ಚಾಮರಾಜನಗರ, ಮಡಿಕೇರಿ ಮತ್ತು ಹಾಸನ ಸೇರಿದಂತೆ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಮೈಸೂರಿನಲ್ಲೇ ಇದು ವಿಶ್ವದರ್ಜೆಯ ಆರೈಕೆಯಾಗಿದೆ ಎಂದು ಮಾಹಿತಿ ನೀಡಿದರು.

ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಜತೆಗೆ ಜನರೂ ಕೂಡ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. 40 ವರ್ಷ ವಯಸ್ಸಾದ ಬಳಿಕ ಮಹಿಳೆಯರು ಮತ್ತು ಪುರುಷರು 800 ರೂ.ನಿಂದ 1200 ರೂ.ವರೆಗಿನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗಲಿದೆ ಎಂದರು.

ಭಾರತ್ ಆಸ್ಪತ್ರೆ ಮತ್ತು ಅಂಕೋಲಾಜಿ ಸಂಸ್ಥೆಯ ಸಿಇಒ ಗೌತಮ್ ಧಮೇರ್ಲಾ, ಮಾರ್ಕೆಟಿಂಗ್ ವಿಭಾಗದ ಸಹಾಯಕ ವ್ಯವಸ್ಥಾಪಕ ಸುನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net