ವೈದ್ಯಕೀಯ ಬಿಕ್ಕಟ್ಟುಗಳಿಗೆ ರೊಬಾಟಿಕ್ ಪರಿಹಾರ; ಸಾಹೇ ವಿವಿ ಉಪಕುಲಪತಿ ಡಾ.ಬಾಲಕೃಷ್ಣ ಪಿ.ಶೆಟ್ಟಿ

28TMK_SSIT
Published on

ತುಮಕೂರು: ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದಿಂದ ಆರಂಭಿಸಲಾಗಿರುವ ರೊಬಾಟಿಕ್ ಪ್ರೋಸಸ್ ಆಟೊಮೇಷನ್ ಕೇಂದ್ರವನ್ನು ಸಾಹೇ ವಿವಿ ಉಪಕುಲಪತಿ ಡಾ.ಬಾಲಕೃಷ್ಣ ಪಿ.ಶೆಟ್ಟಿ ಶನಿವಾರ ಉದ್ಘಾಟಿಸಿದರು.

ಆಟೊಮೇಷನ್ ಪ್ರಕ್ರಿಯೆಯಿಂದ ಜನಜೀವನ ನಿರ್ವಹಣೆಯ ಬಹುತೇಕ ಕ್ಷೇತ್ರಗಳಿಗೆ ಮಹತ್ತರ ಉಪಯೋಗವಾಗಲಿದೆ. ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಹಲವು ಬಿಕ್ಕಟ್ಟುಗಳಿಗೆ ರೊಬಾಟಿಕ್ ತಂತ್ರಜ್ಞಾನ ಅಳವಡಿಕೆಯಿಂದ ಪರಿಹಾರ ದೊರಕಲಿದೆ ಎಂದು ಉಪಕುಲಪತಿ ಡಾ.ಬಾಲಕೃಷ್ಣ ಪಿ.ಶೆಟ್ಟಿ ಹೇಳಿದರು.

ರೋಗಿಗಳ ವೈಯಕ್ತಿಕ ವಿವರಗಳ ಗೌಪ್ಯತೆ, ಆಸ್ಪತ್ರೆ ಕಚೇರಿ ದಾಖಲೆಗಳ ನಿರ್ವಹಣೆಯಲ್ಲಿ ಆಗುತ್ತಿರುವ ದೋಷಗಳು ಮತ್ತು ವಿಳಂಬ ತಪ್ಪಿಸಬಹುದು, ಡಿಜಿಟಲ್ ಯುಗದಲ್ಲಿ ಕಾಲಮಿತಿಯೊಳಗೆ ಯಾವುದೇ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲವಾದ್ದರಿಂದ ರೊಬಾಟಿಕ್ ಪ್ರಕ್ರಿಯೆ ಅಳವಡಿಕೆ ಅನಿವಾರ್ಯ ಮತ್ತು ಅಗತ್ಯ ಎಂದರು.

ಬ್ಲೂಪ್ರಿಸಮ್ ಸಂಸ್ಥೆಯ ಬೆಂಗಳೂರು ವಿಭಾಗದ ಎಂ.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳುವ ವೃತ್ತಿ ನೈಪುಣ್ಯತೆಯನ್ನು ತರಬೇತಿಗಳ ಮೂಲಕ ಕಲಿಸಿಕೊಡಲಾಗುವುದು ಎಂದು ಹೇಳಿದರು.

ಬೆಂಗಳೂರಿನ ನತೆಲ್ಲಾ ಇನ್ನೋವೇಷನ್ ಕಂಪನಿಯ ನಿರ್ದೇಶಕ ಎಂ.ಪ್ರದೀಪ್, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿಪ್ರಕಾಶ್, ಸಾಹೇ ವಿವಿ ಕುಲಸಚಿವ ಡಾ.ಎಂ.ಝೆಡ್.ಕುರಿಯನ್ ವಾತನಾಡಿದರು. ಇ ಆ್ಯಂಡ್ ಸಿ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಸಿ.ಚಂದ್ರಶೇಖರ್ ಹಾಗೂ ಪ್ರಾಧ್ಯಾಪಕಿ ಎಂ.ಸುಷ್ಮಾ ರೊಬೋಟಿಕ್ ಪ್ರೋಸೆಸ್ ಆಟೊಮೇಷನ್ ಕೇಂದ್ರದ ಕಾರ್ಯನಿರ್ವಹಣೆಯ ಮುನ್ನೋಟ ವಿವರಿಸಿದರು. ಪ್ರಾಧ್ಯಾಪಕರಾದ ಎಚ್.ಸಿ.ರಶ್ಮಿ, ಎನ್.ಪ್ರದೀಪ್, ಜಿ.ನಿರ್ಮಲಾ, ಪ್ರಿಯಾಂಕ ಮತ್ತಿತರರು ಇದ್ದರು.

ಅಂತಾರಾಷ್ಟ್ರೀಯ ಮಟ್ಟದ ರೊಬಾಟಿಕ್ ಸಂಶೋಧನಾ ಕೇಂದ್ರ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗಿ ರೊಬಾಟಿಕ್ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ, ತರಬೇತಿ ಮತ್ತು ಉದ್ಯೋಗ ಕುರಿತಾದ ಪರಸ್ಪರ ವಿನಮಯಕ್ಕಾಗಿ ಸಿಂಗಾಪುರ್‌ನ ಬ್ಲೂಪ್ರಿಸಮ್ ಸಂಸ್ಥೆ ಹಾಗೂ ಬೆಂಗಳೂರಿನ ನತೆಲ್ಲಾ ಕಂಪನಿಗಳ ಸಹಯೋಗದಲ್ಲಿ ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುವಾರು 20 ಲಕ್ಷ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೊಬಾಟಿಕ್ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ. ಎರಡು ವರ್ಷದ ಈ ಪ್ರಾಜೆಕ್ಟ್‌ನಲ್ಲಿ ಸುವಾರು 600 ವಿದ್ಯಾರ್ಥಿಗಳಿಗೆ ರೊಬಾಟಿಕ್ ಕ್ಷೇತ್ರದಲ್ಲಿ ಅಧ್ಯಯನ, ತರಬೇತಿ ಮತ್ತು ಉದ್ಯೋಗ ಕುರಿತಾದ ಸಂಶೋಧನೆಗೆ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net