ಕದ್ರಿ ಪಾರ್ಕ್‌ನಲ್ಲಿ ರೋಬೋಟಿಕ್ ಚಿಟ್ಟೆ ಪ್ರದರ್ಶನ ಉದ್ಘಾಟನೆ

mng_21 dic chetti pradarshana
ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರೋಬೋಟಿಕ್ ಚಿಟ್ಟೆ ಪ್ರದರ್ಶನಕ್ಕೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಶಾಸಕ ವೇದವ್ಯಾಸ ಕಾಮತ್ ರೋಬೋಟಿಕ್ ಚಿಟ್ಟೆ ಪ್ರದರ್ಶನಕ್ಕೆ ಚಾಲನೆ ನೀಡಿದರು.
Published on

ಮಂಗಳೂರು: ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರೋಬೋಟಿಕ್ ಚಿಟ್ಟೆ ಪ್ರದರ್ಶನ ಉದ್ಘಾಟನೆಯು ಕದ್ರಿ ಪಾರ್ಕ್‌ನಲ್ಲಿ ಭಾನುವಾರ ಸಂಜೆ ನಡೆಯಿತು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಶಾಸಕ ವೇದವ್ಯಾಸ ಕಾಮತ್ ರೋಬೋಟಿಕ್ ಚಿಟ್ಟೆ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಪ್ರಥಮ ಬಾರಿಗೆ ಈ ಶೋ ನಡೆಯುತ್ತಿದೆ. ಮಂಗಳೂರು ಜನತೆಗೆ ಇದೊಂದು ಅಪೂರ್ವ ಅವಕಾಶ. ಈ ಬಾರಿ ಕರಾವಳಿ ಉತ್ಸವವನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಶೋ ನಡೆಸಲಾಗಿದೆ. ಜಿಲ್ಲಾಧಿಕಾರಿಯವರ ಪರಿಕಲ್ಪನೆಯಿಂದ ಇದು ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಚಿಟ್ಟೆಗಳು ಕ್ಷೀಣಿಸುತ್ತಿದ್ದು, ಚಿಟ್ಟೆಯ ಜಾಗೃತಿಗಾಗಿ ಹಾಗೂ ಪ್ರಾಕೃತಿಕ ಸಮತೋಲನಕ್ಕಾಗಿ ಈ ಪ್ರದರ್ಶನ ನಡೆಸಲಾಗಿದೆ. ಸಧ್ಯವಾದರೆ ಮುಂದಿನ ದಿನಗಳಲ್ಲಿ ಜೀವಂತ ಚಿಟ್ಟೆಗಳ ಪ್ರದರ್ಶನ, ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಾತನಾಡಿ, ಎಲ್ಲಾ ರೀತಿಯ ಹಾರುವ ಚಿಟ್ಟೆಗಳ ಅಪರೂಪದ ಪ್ರದರ್ಶನ ಕದ್ರಿ ಪಾರ್ಕ್‌ನಲ್ಲಿ ರೊಬೋಟಿಕ್ ಸ್ವರೂಪದಲ್ಲಿ ಆರಂಭಿಸಲಾಗಿದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಂತಹ ಚಿಟ್ಟೆಗಳ ಸ್ವರೂಪ ಇಲ್ಲಿದೆ. ನಗರವಾಸಿ ಮಕ್ಕಳಿಗೆ ಇದರ ಪೂರ್ಣ ಮಾಹಿತಿ ಸಿಗಲಿದೆ. ಶಾಲಾ ಮಕ್ಕಳಿಗೆ ಶೇ.50 ರಿಯಾಯಿತಿ ದರವಿರಲಿದೆ ಎಂದರು.

ಒಂದೇ ಸೂರಿನಡಿ ಮಿಡತೆ, ಡ್ರಾಗನ್‌ಫ್ಲೈ, ಹಾರುವ ಇರುವೆ, ಅಲೇಟ್ಸ್, ಚೇಳು, ಹರ್ಕ್ಯಲಸ್ ಜೀರುಂಡೆ, ಕಣಜ, ಒಂಟೆಹುಳು, ಜೇನುಹುಳು ಸಹಿತ ಎಲ್ಲಾ ಚಿಟ್ಟೆಗಳನ್ನು ನೋಡುವ ಅವಕಾಶವಿದೆ. ಮಕ್ಕಳಿಗೆ ಅರಿವು ನೀಡಲು ಇದೊಂದು ಸುವರ್ಣ ಅವಕಾಶ.

ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್, ಸಹಾಯಕ ಆಯುಕ್ತ ಹರ್ಷವರ್ಧನ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರಾಜೇಶ್, ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.

---------------------

ರೋಬೋಟಿಕ್ ಚಿಟ್ಟೆ ಪ್ರದರ್ಶನ ವಿಶೇಷ ಪರಿಲ್ಪನೆ

ನಗರವಾಸಿಗಳಿಗೆ ಚಿಟ್ಟೆ, ಚೇಳು, ಜೀರುಂಡೆ ಒಂಟೆ ಹುಳಗಳು ಕಾಣುವುದು ಅಪರೂಪ. ಹೀಗಾಗಿ ಅವು ಹೇಗಿರುತ್ತವೆ ಎಂಬುದನ್ನು ತಿಳಿಯುವ ಕುತೂಹಲ ಇದೆ. ಇದಕ್ಕಾಗಿ ಅಪರೂಪದ ರೋಬೊಟಿಕ್ ಬಟರ್‌ಫ್ಲೈ ಶೋ ಮುಂದಿನ 1 ತಿಂಗಳವರೆಗೆ ಇದು ಸಂಜೆ 4ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರಲಿದೆ. ಮಕ್ಕಳಿಗೆ, ಯುವ ಜನತೆಗೆ ಹಾಗೂ ಪ್ರದರ್ಶನಕ್ಕೆ ಭೇಟಿ ಕೊಡುವ ನಾಗರೀಕರಿಗೆ ವಿವಿಧ ಆಕರ್ಷಣೆಯ ರೋಬೊಟಿಕ್ ಮಾದರಿಯಲ್ಲಿ ಶೋ ಏರ್ಪಾಡು ಮಾಡಲಾಗಿರುವುದು ವಿಶೇಷ ಪರಿಲ್ಪನೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net