ರಾಬರ್ಟ್ ಬ್ರೂಸ್‌ಫೂಟ್ ಮ್ಯೂಸಿಯಂ ಡಿಜಿಟಲೀಕರಣ; ನವಶಿಲಾಯುಗದ ವಸ್ತುಗಳಿಗೆ 3ಡಿ ಟಚ್

BLY- 28-2
ಬಳ್ಳಾರಿ ನಗರದಲ್ಲಿರುವ ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ.
Published on

ಬಳ್ಳಾರಿ: ನವಶಿಲಾಯುಗದ ಪ್ರಾಚೀನ ವಸ್ತುಗಳಿಗೆ ಇದೀಗ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅನಾದಿಕಾಲದಿಂದಲೂ ಮಾನವ ಹುಟ್ಟಿನಿಂದ ಮಾನವನ ವಾಸದ ಕುರುಹುಗಳನ್ನು ಮುಂದಿನ ಪೀಳಿಗೆಗೂ ಅವುಗಳನ್ನು ಸಂರಕ್ಷಣೆ ಮಾಡಲು 3ಡಿ ಟಚ್ ನೀಡಲಾಗುತ್ತಿದೆ.

ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿರುವ ರಾಬರ್ಟ್ ಬ್ರೂಸ್‌ಫೂಟ್ ಮ್ಯೂಸಿಯಂನಲ್ಲಿ ಪ್ರಾಗೈತಿಹಾಸಿಕ ಕಾಲದ ನೆಲೆಗಳನ್ನು ಕಾಣಬಹುದು. ಅವುಗಳ ಸಂರಕ್ಷಣೆಗಾಗಿ ದೇಶ-ವಿದೇಶಗಳಿಂದ ಸಂಶೋಧನೆಗೆ ಇತಿಹಾಸ ತಜ್ಞರು ಮ್ಯೂಸಿಯಂಗೆ ಭೇಟಿ ನೀಡುತ್ತಿದ್ದಾರೆ.

ಜಿಲ್ಲೆಯ ಕೆಲವು ಪ್ರದೇಶಗಳು ಪ್ರಾಗೈತಿಹಾಸಿಕ ಕಾಲದ ನೆಲೆಗಳಾಗಿದ್ದವು. ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳು ಇದರಲ್ಲಿವೆ.


ಸಂಗನಕಲ್ಲು ಗ್ರಾಮದ ಬಳಿಯ ಬೆಟ್ಟಗಳು ಪ್ರಾಚೀನ ಮಾನವನ ವಾಸದ ಕುರುಹುಗಳನ್ನು ಹೊಂದಿವೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿರುವ ಬೆಟ್ಟಗಳು ಐದು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೇಳುತ್ತವೆ. ಈ ಬೆಟ್ಟಗಳಲ್ಲಿ ನವಶಿಲಾಯುಗದಿಂದ ಕಬ್ಬಿಣದ ಯುಗದವರೆಗಿನ ಮನುಷ್ಯ ನೆಲೆಯ ಅವಶೇಷಗಳಿವೆ. ಶಿಲಾ ಉಪಕರಣಗಳು, ಮಡಕೆಗಳು, ಉತ್ಪನದ ವೇಳೆ ದೊರೆತ ಇತ್ಯಾದಿ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿಡಲಾಗಿದೆ.


ಮ್ಯೂಜಿಯಂ ಕೆಳಮಹಡಿಯಲ್ಲಿರುವ ಮಾನವನ ಜೈವಿಕ, ಸಾಂಸ್ಕೃತಿಕ ವಿಕಸನ ಹಾಗೂ ಆದಿಮಾನವ ಮೂಲ ನೆಲೆಯಾದ ಆಫ್ರಿಕಾದಿಂದ ಜಗತ್ತಿನ ಇತರ ಭೂ ಭಾಗಕ್ಕೆ ವಲಸೆ ಹೋದ ಎಂಬುದರ ಮಾಹಿತಿ, ಆದಿ ಮಾನವನ ವಿಕಸನದ ವಿವಿಧ ಹಂತಗಳ ಬುರುಡೆ ಮಾದರಿಯ ಪ್ರತಿರೂಪಗಳು,ಭಾರತದ ಪ್ರಾಚೀನತೆ, ಸಾಂಸ್ಕೃತಿಕ ಬೆಳವಣಿಗೆ, ಶಿಲಾಯುಗದ ವಿವಿಧ ಹಂತಗಳು ಹಾಗೂ ಕೃಷಿ ಜೀವನದ ಆರಂಭದವರೆಗಿನ ಬೆಳವಣಿಗೆಗಳ ಇತಿಹಾಸ, ಉತ್ತರ ಕರ್ನಾಟಕ ಹಾಗೂ ಆಂಧ್ರದ ರಾಯಲಸೀಮಾ ಭಾಗದಲ್ಲಿ ದೊರೆತಿರುವ ಪ್ರಾಗೈತಿಕಹಾಸದ ವಸ್ತುಗಳು ಬಗ್ಗೆ ಕುರುಹುಗಳನ್ನು ಸಂರಕ್ಷಿಸಿ ಇಡಲಾಗಿದೆ.

ಪುರಾತನ ಇತಿಹಾಸಕ್ಕೆ ಡಿಜಿಟಲ್ ಸ್ಪರ್ಶ
ಬಳ್ಳಾರಿ ನಗರದಲ್ಲಿರುವ ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಪುರಾತನ ಇತಿಹಾಸ ಹೇಳುವ ಬುರುಡೆ, ಕಲ್ಲುಗಳು, ಮಾನವನ ದಿನಬಳಕೆಯ ವಸ್ತುಗಳ ಸಂಗ್ರಹವೇ ಇದೆ. ಅದಕ್ಕೆ ಇದೀಗ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ಈ ವಸ್ತು ಸಂಗ್ರಹಾಲಯಲಯಕ್ಕೆ ಅಧ್ಯಯನಕ್ಕಾಗಿ ದೇಶ-ವಿದೇಶಗಳಿಂದ ಅನೇಕರು ಬಂದು ಅಧ್ಯಯನ ಮಾಡಿರುವ ನಿದರ್ಶನಗಳಿವೆ. ಪ್ರಸಕ್ತ ಸಾಲಿನಲ್ಲಿ ಇಸ್ರೇಲ್‌ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳ ಮೂಲದ ಸುತುನುಕ ಭಟ್ಟಚಾರ್ಯ ಅವರು ಇಲ್ಲಿನ ಪುರಾತನ ಕಾಲದ ಪಳೆಯುಳಿಕೆಗಳಿಗೆ ಡಿಜಿಟಲ್ ರೂಪ ನೀಡುತ್ತಿದ್ದಾರೆ. ಅವರು ಪಶ್ಚಿಮ ಬಂಗಾಳದ ಹುಗ್ಲಿ ಜಿಲ್ಲೆ ಚುಚುರ ಗ್ರಾಮದವರು. ಕಳೆದ ನಾಲ್ಕು ತಿಂಗಳಿಂದ ಬಳ್ಳಾರಿಯಲ್ಲಿರುವ ಮ್ಯೂಸಿಯಂನಲ್ಲಿ ಪ್ರಾಚೀನ ಕಾಲದ ಇತಿಹಾಸ ಸಾರುವ ವಸ್ತುಗಳ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ, ಚಿತ್ರದುರ್ಗ ಭಾಗದಲ್ಲಿ ಅಲ್ಲದೆ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು, ಕುಡತಿನಿ, ತೆಕ್ಕಲಕೋಟೆ ಭಾಗದಲ್ಲಿ ಪ್ರಯಾಣಿಸಿ ಮಾನವನ ಇತಿಹಾಸವನ್ನು ದಾಖಲೀಕರಿಸುತ್ತಿದ್ದಾರೆ.

ಏನಿದು ರಾಬರ್ಟ್ ಬ್ರೂಸ್‌ಫೂಟ್ ಮ್ಯೂಸಿಯಂ
ದೇಶದಲ್ಲಿ ಆದಿಮಾನವನ ನೆಲೆಗಳನ್ನು ಗುರುತಿಸಿದ ಮೊದಲ ವ್ಯಕ್ತಿ ರಾಬರ್ಟ್ ಬ್ರೂಸ್‌ಫೂಟ್ (1834 - 1912), ಬ್ರಿಟಿಷ್ ಭೂ ವಿಜ್ಞಾನಿ. ಅವರು ಸಂಗನಕಲ್ಲು ನವಶಿಲಾಯುಗದ ಕುರಿತು ಅಧ್ಯಯನ ಮಾಡಿ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಪೂರ್ವ ಶಿಲಾಯುಗದ ಸ್ಥಳಗಳನ್ನು ಗುರುತಿಸಿದ್ದಾರೆ. ಹಸುವಿನ ಸಗಣಿಯ ರಾಶಿಯಿಂದ ಸುಟ್ಟು ನಿರ್ಮಿಸಲಾಗಿರುವ ಬೂದಿ ದಿಬ್ಬಗಳು ನವಶಿಲಾಯುಗದ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಮೊದಲ ವ್ಯಕ್ತಿಯೂ ರಾಬರ್ಟ್ ಬ್ರೂಸ್‌ಫೂಟ್. ಈ ಹಿನ್ನೆಲೆಯಲ್ಲಿ ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಎಂದು ಹೆಸರಿಡಲಾಗಿದೆ.
ರಾಬರ್ಟ್ ಬ್ರೂಸ್‌ಫೂಟ್‌ರನ್ನು ಭಾರತೀಯ ಪ್ರಾಗೈತಿಕಹಾಸದ ಪಿತಾಮಹ ಹಾಗೂ ಸಂಗನಕಲ್ಲು ನವಶಿಲಾಯುಗದ ಸಂಶೋಧನೆಯ ಪ್ರವರ್ತಕ ಎಂದು ಗುರುತಿಸಲಾಗುತ್ತದೆ. ಆಫ್ರಿಕಾವನ್ನು ಮನಷ್ಯನ ಮೂಲ ನೆಲೆ ಎಂದು ಏಕೆ ಕರೆಯಲಾಗುತ್ತದೆ ಎಂಬುದರಿಂದ ಭೌಗೋಳಿಕವಾಗಿ ಉತ್ತರ ಮೈದಾನ ಪ್ರದೇಶ ಎಂದು ಕರೆಯಲಾಗುವ ಸ್ಥಳದ ನಗರೀಕರಣದವರೆಗಿನ ವಿವಿಧ ಹಂತಗಳು ಹಾಗೂ ಸಂಗನಕಲ್ಲುಗೆ ಸಂಬಂಧಿಸಿದ ವಿಷಯ ವಸ್ತುವನ್ನು ಮ್ಯೂಜಿಯಂನಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net