

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಚಾಕುವಿನಿಂದ ಇರಿದು ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದ ಮೂವರು ದುಷ್ಕರ್ಮಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಪೀಣ್ಯ ನಿವಾಸಿಗಳಾದ ತೇಜಸ್(26), ಸನ್ಮಾಲ್(25) ಹಾಗೂ ಟಿ.ಬೇಗೂರಿನ ಚಾನ್‌ಪಾಷಾ (23) ಬಂಧಿತರು. ಆರೋಪಿಗಳಿಂದ 5 ಮೊಬೈಲ್ ಹಾಗೂ ಬೈಕ್ ವಶ ಪಡಿಸಿಕೊಳ್ಳಲಾಗಿದೆ.
ಜೂ.10ರಂದು ಕೂಲಿಪುರದ ಬಸವರಾಜು ಎಂಬುವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಗಂಗಾಧರನಪಾಳ್ಯ ಬಳಿ ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡಿದ್ದರು. ಮೊಬೈಲ್ ಹಿಂತಿರುಗಿಸುವಂತೆ ಬಸವರಾಜು ಗೋಗರೆದ ವೇಳೆ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಇದೇ ಮಾರ್ಗವಾಗಿ ಬರುತ್ತಿದ್ದ ಸ್ನೇಹಿತ ಶಶಿಕುಮಾರ್ ಎಂಬುವರು ಗಂಭೀರ ಗಾಯಗೊಂಡಿದ್ದ ಬಸವರಾಜುನನ್ನು ತಕ್ಷಣ ನಗರದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಭಿನ್ನಮಂಗಲದ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದರು. ಮೊಬೈಲ್ ನೆಟ್‌ವರ್ಕ್ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಜೂ.19ರಂದು ಪೀಣ್ಯದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ರೌಡಿಶೀಟರ್: ಆರೋಪಿ ತೇಜಸ್ ಮೇಲೆ 13 ಪ್ರಕರಣಗಳಿದ್ದು, ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಆರೋಪಿ ಸನ್ಮಾಲ್ ಮೇಲೆ 2 ಪ್ರಕರಣಗಳಿದ್ದು, ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಆರೋಪಿ ಚಾನ್‌ಪಾಷ್ ಕ್ಯಾತಸಂದ್ರ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಗೌತಮ್ ಮಾರ್ಗದರ್ಶನ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ರಾಜೀವ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಬಾಲಾಜಿಸಿಂಗ್, ಸುನೀಲ್, ಕೃಷ್ಣಮೂರ್ತಿ, ದಿನೇಶ್, ಚನ್ನಬಸಪ್ಪ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.