

ಉಪ್ಪಿನಂಗಡಿ: ಇಲ್ಲಿನ ಹೃದಯ ಭಾಗದಲ್ಲಿರುವ ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿರುವ ದಿನಸಿ ಅಂಗಡಿ ಹಾಗೂ ಬಾರ್ ರೆಸ್ಟೋರೆಂಟ್‌ಗಳಿಗೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಕದ್ದೊಯ್ದಿದ್ದಾರೆ.
ಮಧ್ಯರಾತ್ರಿ 1.30ರ ಸುಮಾರಿಗೆ ಮಂಕಿ ಕ್ಯಾಪ್ ಧರಿಸಿದ ಇಬ್ಬರು ಕಾಂಪ್ಲೆಕ್ಸ್‌ನಲ್ಲಿರುವ ಸಿಸಿ ಕ್ಯಾಮರಾದ ದಿಕ್ಕು ಬದಲಿಸಿ ಕೃತ್ಯಕ್ಕೆ ಮುಂದಾಗಿದ್ದಾರೆ. ದಿನಸಿ ಅಂಗಡಿ ಬೀಗ ಮುರಿದು ಒಳನುಗ್ಗಿ ಸಾವಿರಾರು ರೂ. ಹಣ ಎಗರಿಸಿದ್ದು ಅಂಗಡಿಯ ದಾಸ್ತಾನು ಕೊಠಡಿಯ ಬೀಗ ಕೂಡ ಮುರಿದಿದ್ದಾರೆ.
ಬಳಿಕ ಅದೇ ಕಟ್ಟಡದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ನುಗ್ಗಿ, ಕ್ಯಾಶ್ ಕೌಂಟರ್‌ನಲ್ಲಿ ಸಾವಕಾಶವಾಗಿ ಕುಳಿತು ಹಣ ಜಾಲಾಡುತ್ತಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಆದರೆ ಇಲ್ಲಿ ಕಳ್ಳತನಕ್ಕೆ ಯತ್ನ ಮಾತ್ರ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳ್ಳರು ಪೂರ್ವಯೋಜಿತವೆಂಬಂತೆ ಕಳ್ಳತನಕ್ಕೆ ಪೂರ್ವಭಾವಿಯಾಗಿ ಹೆದ್ದಾರಿ ಬಳಿಯ, ಕಳ್ಳತನ ನಡೆದ ಕಟ್ಟಡದ ಸನಿಹದ ಟವರ್‌ನಲ್ಲಿ ಅಳವಡಿಸಿದ ಪೊಲೀಸ್ ಇಲಾಖಾ ಸಿಸಿ ಕ್ಯಾಮರಾದ ಬಗ್ಗೆಯೂ ಕಳ್ಳರು ಮಾಹಿತಿ ಪಡೆದಿದ್ದು, ಕೃತ್ಯಕ್ಕೆ ಮುಂಚಿತವಾಗಿ ಮುಖ ಮರೆ ಮಾಚಿ ಸಿಸಿ ಕ್ಯಾಮರಾದ ದಿಕ್ಕು ಬದಲಿಸಿದ್ದರು. ಜನ ಸಂಚಾರವಿರುವ ಪ್ರಮುಖ ರಸ್ತೆಯ ಬದಿ ಕಳ್ಳತನದ ಕೃತ್ಯ ನಡೆಸುವುದು ಹೊರಜಗತ್ತಿಗೆ ಗೊತ್ತಾಗದಂತೆ ಖಾಲಿ ಬಾಟಲಿಗಳನ್ನು ತುಂಬಿಸಿಟ್ಟ ಗೋಣಿಚೀಲ ಅಡ್ಡವಾಗಿರಿಸಿ ಬೀಗ ಮುರಿದಿದ್ದಾರೆ.
ಇತ್ತೀಚೆಗೆ ಉಪ್ಪಿನಂಗಡಿ ಪರಿಸರದಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ದುರ್ಬಲವಾಗಿರುವುದರಿಂದ ಕಳ್ಳರು ರಾಜಬೀದಿಯಲ್ಲೇ ರಾಜಾರೋಷವಾಗಿ ಕಳ್ಳತನ ಮಾಡಲು ಕಾರಣವಾಗಿದೆ. ಈ ಬಗ್ಗೆ ಉಪ್ಪಿನಂಗಡಿ ವರ್ತಕ ಸಂಘ ಕಳವಳ ವ್ಯಕ್ತಪಡಿಸಿದೆ. ಘಟನಾ ಸ್ಥಳಕ್ಕೆ ಪ್ರೊಬೆಷನರಿ ಎಎಸ್ಪಿ ರೋಹನ್ ಜಗದೀಶ್, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.