ದರೋಡೆಕೋರರ ಬೆದರಿಕೆಗೆ ಮಣಿದು ಚೆಕ್ ಬರೆದು ಕೊಟ್ಟ ಬ್ಯಾಂಕ್ ನಿವೃತ್ತ ಅಧಿಕಾರಿ!

Robbery
Published on

ಹಳೆಯಂಗಡಿ: ಇಲ್ಲಿನ ಕೊಪ್ಪಳ ಬಳಿ ನಿವಾಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಪದ್ಮನಾಭ ಸನಿಲ್(80) ಅವರ ಮನೆಗೆ ಹಿಂಬಾಗಿಲಿನಿಂದ ನುಗ್ಗಿದ ದರೋಡೆಕೋರರು ಚಾಕು ತೋರಿಸಿ ಹಣದೊಂದಿಗೆ ಪರಾರಿಯಾಗಿದ್ದಾರೆ.

ಹಳೆಯಂಗಡಿಯ ಕೊಪ್ಪಳ ಬಳಿಯ ಪದ್ಮನಾಭ ಸನಿಲ್ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಪತ್ನಿ ಹಾಗೂ ವೈದ್ಯೆ ಮಗಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಸೋಮವಾರ ರಾತ್ರಿ ಇಬ್ಬರು ಅಪರಿಚಿತರು ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ಪದ್ಮನಾಭ ಅವರನ್ನು ನಗ, ನಗದು ಕೊಡಬೇಕು ಎಂದು ಬೆದರಿಸಿದ್ದಾರೆ.

ಪದ್ಮನಾಭ ಅವರು ತನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಆದರೆ ದರೋಡೆಕೋರರು ಮತ್ತೆ ಬೆದರಿಸಿದಾಗ ಅವರಿಗೆ ಹಳೆಯಂಗಡಿ ಕೆನರಾ ಬ್ಯಾಂಕ್‌ನ ಚೆಕ್‌ನಲ್ಲಿ 3000 ರೂ. ಬರೆದು ರುಜು ಮಾಡಿ ನೀಡಿದ್ದಾರೆ. ಈ ನಡುವೆ ಮನೆಯೊಳಗೆ ಬಂದ ದುಷ್ಕರ್ಮಿಗಳು ಮನೆಯನ್ನು ಹಣಕ್ಕಾಗಿ ಜಾಲಾಡಿದ್ದು ಟೇಬಲ್‌ನಲ್ಲಿ ಸಣ್ಣ ಚೆಂಬು ಒಳಗಡೆ ತೆಂಗಿನಕಾಯಿ ಮುಚ್ಚಿ ಜುಮಾದಿ ದೈವದ ಈಡು ಹರಕೆಗಾಗಿ ಇಟ್ಟಿದ್ದ ಮೂರೂವರೆ ಸಾವಿರ ರೂ. ದೋಚಿದ್ದಾರೆ.

ಅಪರಿಚಿತರು ಉತ್ತರ ಕನ್ನಡ ಭಾಷೆ ಮಾತನಾಡುತ್ತಿದ್ದು, ಈ ಪ್ರದೇಶದ ಅರಿವು ಇರುವ ವ್ಯಕ್ತಿಗಳ ಕೃತ್ಯ ಇರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಪದ್ಮನಾಭ ಸನಿಲ್ ಅವರಿಗೆ ನಾಲ್ಕು ವರ್ಷದ ಹಿಂದೆ ಕಾಲು ಆಪರೇಷನ್ ಆಗಿದ್ದು, ಈಗಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net