

ಗುರುಪುರ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರಳಪದವಿನಲ್ಲಿರುವ ಒಂಟಿ ಮನೆಗೆ ಶುಕ್ರವಾರ ಹಾಡಹಗಲೇ ನುಗ್ಗಿದ ದರೋಡೆಕೋರರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ನಾರಳಪದವು ಗೇರು ಬೀಜದ ಕಾರ್ಖಾನೆ ಬಳಿ ಇರುವ ಸದಾಶಿವ ಸಾವಂತ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಗೆ ಸ್ವಲ್ಪ ದೂರದಲ್ಲಿ ಸಾವಂತ್ ಅವರಿಗೆ ಸೇರಿದ ಅಡಕೆ ತೋಟವಿದ್ದು, ಅವರ ಪತ್ನಿ ಬೆಳಗ್ಗೆಯೇ ತೋಟಕ್ಕೆ ಹೋಗಿದ್ದರು. ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಸಾವಂತ್ ಮರಳಿದಾಗ ದರೋಡೆ ಬೆಳಕಿಗೆ ಬಂದಿದೆ.
ಮನೆಯ ಗೇಟ್‌ಗೆ ಬೀಗ ಹಾಕಿದ್ದ ಕಾರಣ, ಕಳ್ಳರು ಹಿಂಬದಿಯಿಂದ ಮನೆಗೆ ಪ್ರವೇಶಿಸಿದ್ದಾರೆ. ಕಪಾಟು ಒಡೆದು ಎಲ್ಲ ವಸ್ತು ತಡಕಾಡಿ ಮಾಂಗಲ್ಯ, ಬಳೆಗಳು ಹಾಗೂ ಇತರ ಚಿನ್ನದ ಆಭರಣ ಕಳವು ಮಾಡಿದ್ದಾರೆ. ಸಾವಂತ್ ಮನೆಗೆ ಹತ್ತಿರದಲ್ಲಿ ಬೇರೆ ಮನೆ ಇಲ್ಲ. ಮನೆಯವರ ಚಲನವಲನ ತಿಳಿದುಕೊಂಡೇ ದರೋಡೆಕೋರರು ಕೃತ್ಯ ಎಸಗಿದ್ದಾರೆ. ಬಾಗಿಲಿನ ಚಿಲಕ ಒಡೆಯಲು ನೇಗಿಲಿನ ಕಬ್ಬಿಣದ ಪನೋರು ಬಳಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರೊಂದಿಗೆ ಆಗಮಿಸಿದ ಬಜ್ಪೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕೃತ್ಯದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಒಳಗೊಂಡಿದ್ದಾರೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.