

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ರಾಬರಿ ಗ್ಯಾಂಗ್ ಸಕ್ರಿಯವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಊಟ ಮುಗಿಸಿ, ಟಿವಿ ಧಾರಾವಾಹಿ ಅಥವಾ ಮನರಂಜನೆ ನೋಡಿ, ಗಾಢ ನಿದ್ರೆಗೆ ಜಾರಿದ ನಂತರ ನಡುರಾತ್ರಿ ಎರಡು ಗುಂಪುಗಳಲ್ಲಿ ಕಳ್ಳರ ಓಡಾಟ ಶುರುವಾಗಿದ್ದು, ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗವಸು, ಹೆಗಲ ಮೇಲೊಂದು ಬ್ಯಾಗ್ ಏರಿಸಿಕೊಂಡು ಲಾಂಗ್, ಮಚ್ಚು ಕಬ್ಬಿಣದ ರಾಡ್, ಕಲ್ಲುಗಳನ್ನು ಹಿಡಿದು ರಾಜಾರೋಷವಾಗಿ ಮನೆಗಳ ಗೇಟ್ ತೆಗೆಯುವುದು, ಕಾಂಪೌಡ್ ಹತ್ತುವುದು, ಕಿಟಕಿಗಳಲ್ಲಿ ಬಗ್ಗಿ ನೋಡುವ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ನಗರದ ಅಂಚಿನಲ್ಲಿರುವ ನಿಜಗಲ್, ನಂದಿ ಲೇಔಟ್, ಯೋಗಿ ನಾರೇಯಣ ಬಡಾವಣೆ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಕಳ್ಳರ ಚಲನವಲನ ಹಲವು ಮನೆಗಳ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಖದೀಮರ ಭಯಾನಕ ದೃಶ್ಯ ಕಂಡ ನಿವಾಸಿಗಳು ಭಯಭೀತರಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ಸುಮಾರು 12.45ರಲ್ಲಿ ಆರಂಭವಾದ ಕಳ್ಳರ ಸಂಚಾರ ಬೆಳಗಿನ ಜಾವ 3 ಗಂಟೆವರೆಗೆ ಮುಂದುವರಿದಿದ್ದು, ವಿವಿಧ ಮನೆಗಳ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಬೀಟ್ ಪೊಲೀಸ್ ನಿಯೋಜಿಸಲಿ: ಮಂಗಳವಾರ ರಾತ್ರಿ ನಡೆದ ಟನೆಯಿಂದ ಭಯಭೀತರಾಗಿದ್ದೇವೆ. ಜೀವ ಭಯದಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ರಾಜ್ಯ ಪೊಲೀಸ್ ಇಲಾಖೆ ಮನೆ&ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ, ಇದು ನೆಪ ಮಾತ್ರಕ್ಕೆ ಎಂಬಂತೆ ಇದೆ. ನಮ್ಮ ಏರಿಯಾದ ಮನೆಗಳಿಗೆ ಯಾವೊಬ್ಬ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಿಲ್ಲ. ಬೀಟ್ ಕಾನ್ಸ್ಟೆಬಲ್ಗಳು, ಇನ್ಸ್ಪೆಕ್ಟರ್ಗಳು ಮತ್ತು ಪೊಲೀಸ್ ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಿ, ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡಿ ಸ್ಥಳಿಯ ಸಮಸ್ಯೆ ಕೇಳುತ್ತಿಲ್ಲ ಎಂದು ನಿಜಗಲ್ ನಿವಾಸಿ ಸೋಮಣ್ಣ ಆರೋಪಿಸಿದ್ದಾರೆ.
ಕಳ್ಳರ ಕಾಟದಿಂದ ನೆಮ್ಮದಿ ಇಲ್ಲ : ಕಳ್ಳರ ಕಾಟದಿಂದ ನಾವು ಮನೆಗಳಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಜೀವಭಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳ ಕೂಗಳತೆ ದೂರದಲ್ಲಿರುವ ನಮ್ಮ ಮನೆಗಳ ಬಳಿ ಕಳ್ಳರು ಓಡಾಡುತ್ತಿದ್ದಾರೆ. ನಾವು ವಾಸ ಮಾಡುತ್ತಿರುವ ಏರಿಯಾಗಳ ಖಾಲಿ ಜಾಗಗಳು ಕುಡುಕರ ತಾಣವಾಗಿವೆ. ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ನಮಗೆ ಪೊಲೀಸರ ಸೂಕ್ತ ರಕ್ಷಣೆ ಅತ್ಯವಶ್ಯಕವಾಗಿದೆ. ಕೂಡಲೇ ಪೊಲೀಸ್ ಬೀಟ್ ಹೆಚ್ಚಿಸಬೇಕು. ಕಳ್ಳರ ಹೆಡೆಮುರಿಕಟ್ಟಿ ಇನ್ನು ಮುಂದೆ ಇಂತಹ ಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಯೋಗಿ ನಾರಾಯಣ ಬಡಾವಣೆ ನಿವಾಸಿ ಗೌರಮ್ಮ ಒತ್ತಾಯಿಸಿದ್ದಾರೆ.