ಪುರೋಹಿತ ಸೇರಿ ದರೋಡೆಕೋರರು ಯಾರಿಗೆ ಸಿಕ್ಕಿ ಬಿದ್ದರು ಗೊತ್ತಾ?

Jail
Published on

ಚಿಕ್ಕಬಳ್ಳಾಪುರ : ಬೆಳಗಿನ ಜಾವ ರಸ್ತೆಯಲ್ಲಿ ಒಬ್ಬಂಟಿಯಾಗಿ ಬರುವವರನ್ನು ದೋಚಲು ಖಾರದಪುಡಿ, ಮಾರಕಾಸ್ತ್ರಗಳನ್ನಿಡಿದುಕೊಂಡು ಎದುರು ನೋಡುತ್ತಿದ್ದ ಪುರೋಹಿತ ಸೇರಿ ಐವರು ದರೋಡೆಕೋರರನ್ನು ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ತಾಲೂಕಿನ ಕೈವಾರದ ಸೋಮಶೇಖರ್ (26), ಮಂಜುನಾಥ್ (28), ನಾಗಸುಬ್ರಮಣ್ಯಂ (33), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೋಡಿ ಹುಸ್ಕೂರಿನ ರವಿಕುಮಾರ್ (39) ಮತ್ತು ಹೊಸಕೋಟೆಯ ಮೈಲಾರಿ (28) ಬಂಧಿತರು.

ಐವರು ದರೋಡೆಕೋರರು ಕೈವಾರ ಬಳಿ ಆಟೋ ಮತ್ತು ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಬೆಳಗಿನ ಜಾವ ಯಾರಾದರೂ ಬರುತ್ತಾರೆಯೇ? ಎಂದು ಕಾದು ನೋಡುತ್ತಿದ್ದರು. ಇದೇ ವೇಳೆ ಸಬ್ ಇನ್ಸ್ ಪೆಕ್ಟರ್ ಕೆ.ನಾರಾಯಣಸ್ವಾಮಿ ನೇತೃತ್ವದ ತಂಡವು ಗಸ್ತು ತಿರುಗುತ್ತ ಸ್ಥಳಕ್ಕೆ ಬಂದಿದೆ. ಅನುಮಾನಗೊಂಡು ಯಾರಿಗೂ ಅರಿವಿಗೆ ಬಾರದಂತೆ ಬಂದು ಸುಮ್ಮನೆ ನಿಂತುಕೊಂಡು ನೋಡಿದಾಗ, ದುಷ್ಕರ್ಮಿಗಳು ಒಬ್ಬಂಟಿಯಾಗಿ ಬರುವವರನ್ನು ದರೋಡೆ ಮಾಡುವುದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಕೊನೆಗೆ ಪೊಲೀಸರನ್ನು ಕಾಣುತ್ತಿದ್ದಂತೆ ಪರಾರಿಯಾಗಿದ್ದಾರೆ. ಆದರೆ, ಇದೇ ವೇಳೆ ದರೋಡೆಕೋರರಲ್ಲಿನ ಅಂಗವಿಕಲ ರವಿಕುಮಾರ್ ಓಡಲಾಗದೇ ಸಿಕ್ಕಿ ಬಿದ್ದಿದ್ದಾನೆ. ಈತ ಬಾಯಿ ಬಿಟ್ಟ ಮಾಹಿತಿಯಂತೆ ಉಳಿದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿ ನಾಗಸುಬ್ರಮಣ್ಯಂ ಚಿಂತಾಮಣಿ ದೇವಾಲಯವೊಂದರ ಪುರೋಹಿತ. ಇನ್ನು ಸೋಮಶೇಖರ್ ಮತ್ತು ಮೈಲಾರಿ, ರವಿಕುಮಾರ್ ಆಟೋ ಚಾಲಕರಾಗಿದ್ದು ಮಂಜುನಾಥ್ ಗಾರೆ ಕೆಲಸ ಮಾಡುತ್ತಿದ್ದ. ಹಣ ಸಂಪಾದನೆಗಾಗಿ ಒಬ್ಬಂಟಿಯಾಗಿ ಬರುವವರನ್ನು ದೋಚುತ್ತಿದ್ದರು. ಬಂಧಿತರಿಂದ ಖಾರದ ಪುಡಿಯ ಜತೆಗೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net