ನಾಗಾಸಾಧುಗಳ ವೇಷದಲ್ಲಿ ದರೋಡೆ?

28 RMN-MGD P2 (2)
Published on

ಮಾಗಡಿ: ನಾಗಾಸಾಧು ವೇಷಧಾರಿಗಳು ದಾರಿ ಕೇಳುವ, ಆಶೀರ್ವಾದ ಮಾಡುವ ನೆಪದಲ್ಲಿ ದರೋಡೆಗೆ ಯತ್ನಿಸಿರುವ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿವೆ.

ತಾಲೂಕಿನ ಗವಿನಾಗಮಂಗಲ ಗೇಟ್ ಬಳಿ ಗುರುವಾರ ಬೆಳಗ್ಗೆ ಸುಂಕುತಿಮ್ಮಯ್ಯನ ಪಾಳ್ಯಕ್ಕೆ ಮಹದೇವ ಎಂಬುವರು ಕಾರಿನಲ್ಲಿ ತೆರಳುತ್ತಿದ್ದಾಗ, ಪಟ್ಟಣದ ಹೊಸಪೇಟೆ ಮಾರ್ಗವಾಗಿ ಕಾರಿನಲ್ಲಿ ಬಂದ ನಾಲ್ವರು ನಾಗಾ ಸಾಧು ವೇಷಧಾರಿಗಳು ಅಡ್ಡಗಟ್ಟಿದ್ದಾರೆ. ನಂತರ ರಾಮನಗರ ಎಷ್ಟು ದೂರ? ಯಾವ ಕಡೆ ತೆರಳಿದರೆ ಹತ್ತಿರ? ಎಂದು ಹಿಂದಿ ಭಾಷೆಯಲ್ಲಿ ಕೇಳಿದ್ದಾರೆ. ಲಕ್ಷ್ಮೀಪುರ ಮಾರ್ಗವಾಗಿ ತೆರಳುವಂತೆ ಮಹದೇವಯ್ಯ ತಿಳಿಸಿದಾಗ, ಬಾ ಆಶೀರ್ವಾದ ಮಾಡುತ್ತೇನೆ ಎಂದಿದ್ದಾರೆ.

ಆಶೀರ್ವಾದ ಪಡೆಯಲು ಮಹದೇವ್ ತಲೆಬಾಗಿಸಿದ ವೇಳೆ ನಾಗಾಸಾಧುವೊಬ್ಬ ಎಡಗೈನಲ್ಲಿ ಇಟ್ಟುಕೊಂಡಿದ್ದ ದ್ರವವನ್ನು ಮಹದೇವ್ ಮುಖಕ್ಕೆ ಸಿಂಪಡಿಸಿದ ಎನ್ನಲಾಗಿದೆ. ಈ ವೇಳೆ ತಲೆ ತಿರುಗಿ ಬೀಳುವಂತಾಗಿ ಮಹದೇವ ಕಷ್ಟಪಟ್ಟು ಕಾರಿನೊಳಗೆ ಹೋಗಿ ಡೋರ್ ಲಾಕ್ ಮಾಡಿಕೊಂಡಿದ್ದಾರೆ. ನಂತರ ನಾಗಾಸಾಧು ವೇಷಧಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ರಾಮನಗರ- ಮಾಗಡಿ ಮಾರ್ಗದಲ್ಲಿ ಗುಜರಾತ್ ರಾಜ್ಯದ ನೋಂದಣಿ ಇರುವ 2 ಕಾರುಗಳಲ್ಲಿ ತಲಾ 4 ಮಂದಿ ನಾಗಸಾಧುಗಳ ವೇಷದಲ್ಲಿ ತಿರುಗಾಡುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾಮನಗರ- ಮಾಗಡಿ ಮಾರ್ಗದಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಈ ತಂಡ ಗುರಿ ಮಾಡಿ ದರೋಡೆಗೆ ಯತ್ನಿಸುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net