

ದೊಡ್ಡಬಳ್ಳಾಪುರ: ನಗರದ ರೈಲು ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಡಿ.19ರಂದು ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ಮಾಹಿತಿ ನೀಡಿದರು.
ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಚಿಕ್ಕೇಗೌಡ, ಚೇತನ್‌ಕುಮಾರ್, ಬೆಂಗಳೂರಿನ ವಿನಯ್, ಆರ್.ವಿಕ್ರಂ, ಎಂ.ರಜತ್, ಭರತ್‌ಕುಮಾರ್, ತೇಜಸ್, ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಈ ತಂಡ ಹಿಂದೆ ಹಲವು ದರೋಡೆ ನಡೆಸಿದೆೆ. ಡಿ.19ರ ಮಧ್ಯರಾತ್ರಿ ಪೆಟ್ರೋಲ್ ಬಂಕ್‌ನಲ್ಲಿ ಕ್ಯಾಶಿಯರ್ ಮಂಜುನಾಥ್ ಮುಖಕ್ಕೆ ಸ್ಪ್ರೇ ಹಾಕಿ 25 ಸಾವಿರ ರೂ.ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದರು ಎಂದು ಮಾಹಿತಿ ನೀಡಿದರು.
ಈ ಹಿಂದೆ ರಾಜಾನುಕುಂಟೆಯ ರಚನಾ ಬಾರ್‌ನಲ್ಲಿ 1.91ಲಕ್ಷ ರೂ., ಅರಕೆರೆ ಗ್ರಾಮದ ಸಮೀಪ ಇಬ್ಬರು ಮಹಿಳೆಯರಿಂದ ತಲಾ 90 ಗ್ರಾಂ, 30 ಗ್ರಾಂ ಮಾಂಗಲ್ಯಸರ, ಸುರಧೇನುಪುರ ಗೇಟ್ ಬಳಿ ಬಾರ್‌ನಲ್ಲಿ 1.40ಲಕ್ಷ ರೂ. ಸೊಣ್ಣೇನಹಳ್ಳಿಯಲ್ಲಿ ಒಂಟಿ ಮಹಿಳೆಗೆ ಲಾಂಗ್ ತೋರಿಸಿ 52 ಗ್ರಾಂ. ಮಾಂಗಲ್ಯ ಸರ, ಅದ್ದೆ ಗ್ರಾಮದಲ್ಲಿ ತೋಟದಲ್ಲಿದ್ದ ವ್ಯಕ್ತಿಗೆ ಮಚ್ಚು ತೋರಿಸಿ 70ಗ್ರಾಂ ಚಿನ್ನದ ಸರ, ದೊಡ್ಡಬಳ್ಳಾಪುರದ ಮಧುಶ್ರೀ ವೈನ್ಸ್ ಕ್ಯಾಶಿಯರ್ ಮುಖಕ್ಕೆ ಸ್ಪ್ರೇ ಹೊಡೆದು 1 ಲಕ್ಷ ರೂ. ದೋಚಿದ್ದಾರೆ ಎಂದರು.
ಆರೋಪಿಗಳಿಂದ ಕೃತ್ಯಗಳಿಗೆ ಬಳಸಲಾಗಿರುವ 3 ಬೈಕ್, 4 ಲಾಂಗ್, 4ಚಾಕು, 4 ಮಚ್ಚು, 4 ಪೆಪ್ಪರ್ ಸ್ಪೈ ಬಾಟಲ್, 1ಹಾರೆ, 1ರಾಡು, 11.90 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ, 8 ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರನ್ನು ಹುಡುಕಲಾಗುತ್ತಿದೆ ಎಂದು ತಿಳಿಸಿದರು.
ಜೈಲಿನಲ್ಲೇ ದರೋಡೆಗೆ ಸ್ಕೆಚ್: ಆರೋಪಿಗಳಾದ ತೇಜಸ್, ಚೇತನ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಜೈಲಿನಲ್ಲಿದ್ದಾಗ ಪರಿಚಿತರಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಚೇತನ್, ಚಿಕ್ಕೇಗೌಡ ಮಾತನಾಡಿಕೊಂಡು ತೇಜಸ್ ಮತ್ತು ಆತನ ತಂಡವನ್ನು ಕರೆಸಿಕೊಂಡಿದ್ದಾರೆ. ರಾಜಾನುಕುಂಟೆ, ದೊಡ್ಡಬಳ್ಳಾಪುರ ಮಾರ್ಗದಲ್ಲಿ ದರೋಡೆಗೆ ಸೂಕ್ತ ಪ್ರದೇಶ ಗುರುತಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಪೆಟ್ರೋಲ್ ಬಂಕ್‌ಗಳು, ಬಾರ್‌ಗಳಿಗೆ ಹೋಗಿ ಪೆಪ್ಪರ್ ಸ್ಪೈ ಹೊಡೆಯುವುದು, ಲಾಂಗ್ ಮಚ್ಚು ತೋರಿಸಿ ಹಣ ದೋಚುವ ಯತ್ನಗಳನ್ನು ಮುಂದುವರಿಸಿದ್ದಾರೆ.
ತನಿಖೆಗೆ ವಿಶೇಷ ತಂಡ: ಎಸ್ಪಿ ರವಿ ಡಿ.ಚನ್ನಣ್ಣನವರ್, ಎಎಸ್ಪಿ ಲಕ್ಷ್ಮೀ ಗಣೇಶ್, ಡಿವೈಎಸ್ಪಿ ಟಿ.ರಂಗಪ್ಪ ನೇತೃತ್ವದ ತಂಡ ದೊಡ್ಡಬಳ್ಳಾಪುರ ಠಾಣಾ ವ್ಯಾಪ್ತಿಯ ಪೆಟ್ರೋಲ್ ಬಂಕ್ ದರೋಡೆ ಪ್ರಕರಣದ ಬಳಿಕ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆಯ ಕಾಂತರಾಜು ಸಹಕಾರದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾ ತಂಡದಲ್ಲಿ ಸಿಪಿಐ ನವೀನ್‌ಕುಮಾರ್ ಎಂಬಿ, ಪಿಎಸೈ ಎಂ ಶಂಕರಪ್ಪ, ಶ್ರೀಮನ್‌ರಾಜ್, ಸೋಮಶೇಖರ್, ಸಿಬ್ಬಂದಿಗಳಾದ ಎಚ್.ಸಿ ಶ್ರೀನಿವಾಸಯ್ಯ, ಸಿ.ಎನ್.ಕೃಷ್ಣ, ವೆಂಕಟೇಶ್, ಮುನಿರಾಜು, ರಾಧಾಕೃಷ್ಣ ಮತ್ತಿತರರು ಇದ್ದರು.