

ಬೆಂಗಳೂರು: ಕೆಲಸಕ್ಕಿದ್ದ ಅಂಗಡಿಯಲ್ಲಿ ಹಣದ ಮೇಲೆ ಕಣ್ಣು ಹಾಕಿದ್ದ ಕೆಲಸಗಾರರು, ದರೋಡೆ ಮಾಡಿಸಿ ದುಷ್ಕರ್ಮಿಗಳ ಕಥೆಕಟ್ಟಿ ದೂರು ಕೊಟ್ಟು ಇದೀಗ ಜೈಲು ಪಾಲಾಗಿದ್ದಾರೆ.
ದೇವರ ಜೀವನಹಳ್ಳಿ ನಿವಾಸಿ ಸೈಯದ್ ಸುಹೇಲ್ (25), ಸೈಯದ್ ಜವಾದ್ (20), ಸಾಹೀಲ್ ಅಹಮ್ಮದ್ ಖಾನ್ ಅಲಿಯಾಸ್ ಪಾಹದ್ (25), ಮಹಮ್ಮದ್ ಸಾಲ್ಹೇ ಅಲಿ ಅಪೀಪ್ (20), ಮಹಮ್ಮದ್ ಶಾಬಾಜ್ (24) ಹಾಗೂ ಸೈಯದ್ (19) ಬಂಧಿತರು. ದರೋಡೆಗೆ ಸಂಚು ಬಯಲಾಗಿದ್ದು ಹೇಗೆ ಗೊತ್ತಾ?
ಪ್ರಮುಖ ಆರೋಪಿಗಳಾದ ಸೈಯದ್ ಸುಹೇಲ್, ಸೈಯದ್ ಜವಾದ್, ಶಿವಾಜಿನಗರದ ರಸೂಲ್ ಮಾರ್ಕೆಟ್‌ನಲ್ಲಿನ ಮೀನಿನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಸುಹೇಲ್ ಕ್ಯಾಷಿಯರ್ ಆಗಿದ್ದ. ಪ್ರತಿದಿನ ಅಂಗಡಿಯಲ್ಲಿ ಸಂಗ್ರಹವಾಗುತ್ತಿದ್ದ ವ್ಯಾಪಾರದ ಲಕ್ಷಾಂತರ ರೂಪಾಯಿಯನ್ನು ಸುಹೇಲ್ ತನ್ನ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ವಾರಕ್ಕೊಮ್ಮೆ ಮಾಲೀಕನ ಮನೆಗೆ ಹೋಗಿ ತಲುಪಿಸುತ್ತಿದ್ದ. ಮಾಲೀಕ ಹೆಚ್ಚಿನ ನಿಗಾವಹಿಸದ ಹಿನ್ನೆಲೆಯಲ್ಲಿ ಹಣ ಲಪಟಾಯಿಸುವ ಬಗ್ಗೆ ಯೋಚಿಸಿದ್ದರು. ಅಪರಾಧ ಹಿನ್ನೆಲೆಯುಳ್ಳ ಮೊಹಮ್ಮದ್ ಸಾಲ್ಹೆ ಎಂಬಾತನನ್ನು ಸಂಪರ್ಕಿಸಿದ್ದ ಸುಹೇಲ್, ಅಂಗಡಿಯಲ್ಲಿ ಸಂಗ್ರಹವಾಗುವ ಹಣವನ್ನು ದರೋಡೆ ಮಾಡಿ ಪರಸ್ಪರ ಹಂಚಿಕೊಳ್ಳೋಣವೆಂದು ಹೇಳಿದ್ದ. ಅದಕ್ಕೆ ಒಪ್ಪಿದ್ದ ಸಾಲ್ಹೆ, ದರೋಡೆಗೆ ಸಂಚು ರೂಪಿಸಿದ್ದ.
ದೂರು ಕೊಟ್ಟಿದ್ದೇನು?: ನ.8ರ ರಾತ್ರಿ 11.45ರಲ್ಲಿ ಸುಹೇಲ್, ಜವಾದ್ ಹಾಗೂ ಮತ್ತೋರ್ವ ಅಪ್ರಾಪ್ತ ಎರಡು ದ್ವಿಚಕ್ರ ವಾಹನದಲ್ಲಿ ಕಲೆಕ್ಷನ್ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು. ಇದೇ ವೇಳೆ ಹಿಂಬಾಲಿಸಿ ಬಂದಿದ್ದ ನಾಲ್ವರು ಅಪರಿಚಿತರು, ತಿಮ್ಮಯ್ಯ ರಸ್ತೆಯ ಗಣೇಶ್ ದೇವಸ್ಥಾನ ಬಳಿ ಡಿಕ್ಕಿ ಹೊಡೆದು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದರು. ಬಳಿಕ ಸ್ಕೂಟರ್‌ನಲ್ಲಿ ಇಟ್ಟಿದ್ದ ಹಣದ ಬ್ಯಾಗ್ ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಸುಹೇಲ್ ಭಾರತೀನಗರ ಠಾಣೆಗೆ ದೂರು ಕೊಟ್ಟಿದ್ದ. ಈ ವೇಳೆ ಸುಹೇಲ್ ಕೈ ಬೆರಳಿಗೆ ಸಣ್ಣಗಾಯವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸಿಸಿ ಕ್ಯಾಮರಾದಿಂದ ಬಯಲು: ದರೋಡೆ ಬಗ್ಗೆ ನಾಲ್ವರು ಕೆಲಸಗಾರರಿಂದ ಪ್ರತ್ಯೇಕವಾಗಿ ಹೇಳಿಕೆ ಪಡೆಯಲಾಗಿತ್ತು. ಈ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲಮಯ ಹೇಳಿಕೆ ನೀಡಿದ್ದರು. ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ದುಷ್ಕರ್ಮಿಗಳು ಹಲ್ಲೆ ನಡೆಸಿ ದರೋಡೆ ಮಾಡಿರುವುದು ಕಂಡು ಬಂದಿರಲಿಲ್ಲ. ಅಪರಿಚಿತ ನಾಲ್ವರಿಗೆ ಪ್ರತಿರೋಧ ತೋರದೆ ಹಣವಿದ್ದ ಬ್ಯಾಗ್ ಕೊಟ್ಟು ಕಳಿಸಿರುವುದು ಕಂಡು ಬಂದಿತ್ತು. ಅಲ್ಲದೆ, ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವುದಕ್ಕೆ ಸಾಕ್ಷ್ಯ ಇರಲಿಲ್ಲ.
ಗಾಗಿ, ದೂರು ಕೊಟ್ಟವರ ಮೇಲೆ ಅನುಮಾನ ಮೂಡಿತ್ತು. ಸುಹೇಲ್, ಜವಾದ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಸಲಿ ಸತ್ಯ ಬಯಲಾಗಿದೆ. ತಾನೇ ದರೋಡೆ ಮಾಡಿಸಿರುವುದಾಗಿ ಸುಹೇಲ್ ತಪ್ಪೊಪ್ಪಿಕೊಂಡಿದ್ದ. ಬಳಿಕವೇ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ 5.83 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.