

ಬೆಂಗಳೂರು: ಉದ್ಯಮಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದ ಪ್ರಕರಣದ ಏಳು ಆರೋಪಿಗಳನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿಯ ಶಿವಸ್ವಾಮಿ (36), ಕೆಂಗೇರಿಯ ರ್ಇಾನ್ ಅಹಮದ್ (29), ಬನಶಂಕರಿಯ ಇಮ್ರಾನ್ ಅಹಮದ್ (37), ಗಂಗೊಂಡನಹಳ್ಳಿಯ ಶಫಿ ಉಲ್ಲಾ (19), ಅಪ್ಶಾನ್ ಅಹಮದ್ (25), ಆರ್.ಆರ್.ನಗರದ ರಮೇಶ್ (43) ಮತ್ತು ಚಿಕ್ಕಬಾಣಾವರದ ಪರಮೇಶ್ವರಯ್ಯ (54) ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ, ಕಾರು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಶಿವಸ್ವಾಮಿ, ರಮೇಶ್ ಮತ್ತು ಪರಮೇಶ್ವರಯ್ಯ ರಿಯಲ್ ಎಸ್ಟೇಟ್ ಉದ್ಯಮದ ಮಧ್ಯವರ್ತಿಗಳು. ರಮೇಶ್ ಈ ಹಿಂದೆ ಬಂಗಾರಪ್ಪನಗರದ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಜತೆಗೆ ವ್ಯವಹಾರ ಮಾಡುತ್ತಿದ್ದ. ಶ್ರೀನಿವಾಸ್ ನಾಯ್ಡು ಅವರ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದು, ಅವರ ಬಳಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ಇರುವುದನ್ನು ಅರಿತು ದರೋಡೆ ಮಾಡಿಸಲು ನಿರ್ಧರಿಸಿದ್ದ. ಕೃತ್ಯ ಎಸಗಿದರೆ 50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, ಬೆಲೆ ಬಾಳುವ ವಸ್ತುಗಳು ಸಿಗುತ್ತವೆ ಎಂದುಕೊಂಡಿದ್ದ. ಈ ವಿಚಾರವನ್ನು ಸ್ನೇಹಿತ ಪರಮೇಶ್ವರಯ್ಯ ಬಳಿ ಹೇಳಿದ್ದ. ಪರಮೇಶ್ವರಯ್ಯ ತನಗೆ ಪರಿಚಯವಿದ್ದ ಶಿವಸ್ವಾಮಿ ಮೂಲಕ ರ್ಇಾನ್ ಅಹಮದ್, ಇಮ್ರಾನ್ ಅಹಮದ್, ಶಫಿ ಉಲ್ಲಾ , ಅಪ್ಶಾನ್ ಅಹಮದ್‌ನನ್ನು ಸಂಪರ್ಕಿಸಿದ್ದ. ಈ ನಾಲ್ವರೂ ಸೇರಿ ದರೋಡೆ ಮಾಡುವ ಸಂಚು ರೂಪಿಸಿದ್ದರು. ಅ.12ರ ತಡರಾತ್ರಿ 2 ಗಂಟೆಯಲ್ಲಿ ಶ್ರೀನಿವಾಸ್ ನಾಯ್ಡು ಮನೆಗೆ ನುಗ್ಗಿದ್ದರು. ಮುಖಚಹರೆ ಸೆರೆಯಾಗದಂತೆ ಸಿಸಿ ಕ್ಯಾಮರಾಕ್ಕೆ ಬಣ್ಣ ಬಳಿದಿದ್ದರು. ನಾಯ್ಡು ಪುತ್ರಿಯ ಕೊಠಡಿಯಲ್ಲಿ ಕಳವು ಮಾಡುತ್ತಿದ್ದಾಗ ಆಕೆ ಎಚ್ಚರಗೊಂಡು ಗಾಬರಿಯಿಂದ ಕೂಗಿದ್ದಳು. ಈ ವೇಳೆ ನಾಯ್ಡು ಮತ್ತು ಆತನ ಪುತ್ರ ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ರಾಡ್‌ನಿಂದ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ಮೊಬೈಲ್ ಜಖಂ ಮಾಡಿದ್ದರೂ ಸಿಕ್ಕಿಬಿದ್ದರು: ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ದರೋಡೆ ಮಾಡಲು ಎರಡು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಬಂದು ಹೋಗಿರುವುದು ಸಿಸಿ ಕ್ಯಾಮರಾ ದೃಶ್ಯಗಳ ಪರಿಶೀಲನೆಯಿಂದ ಗೊತ್ತಾಗಿತ್ತು. ವಾಹನಗಳ ನಂಬರ್ ಹಾಗೂ ದೋಚಿದ್ದ ಮೊಬೈಲ್‌ನ ಲೋಕೇಷನ್ ಪರಿಶೀಲಿಸಿದಾಗ ನಾಯಂಡಹಳ್ಳಿ ಸಮೀಪ ಓಡಾಡಿರುವ ಸುಳಿವು ಸಿಕ್ಕಿತ್ತು. ಬಳಿಕ ನಾಲ್ವರು ಸಿಕ್ಕಿಬಿದ್ದಿದ್ದರು. ಅವರ ವಿಚಾರಣೆಯಿಂದ ಇತರ ಮೂವರನ್ನು ಬಂಧಿಸಲಾಗಿದೆ. ಮೊಬೈಲ್ ಲೊಕೇಷನ್ ಆಧರಿಸಿ ಪೊಲೀಸರು ಬೆನ್ನು ಹತ್ತಬಹುದು. ಅದನ್ನು ನಮ್ಮ ಬಳಿಯೇ ಇಟ್ಟುಕೊಂಡರೆ ಸಿಕ್ಕಿಬೀಳಬಹುದು ಎಂದು ಯೋಚಿಸಿ ಕೃತ್ಯದ ಬಳಿಕ ಮೊಬೈಲ್ ಮುರಿದು ನಾಯಂಡಹಳ್ಳಿಯ ಲಾಯರ್‌ಪಾಳ್ಯದ ರೈಲು ಹಳಿಗಳ ಮೇಲೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.