ಗುಜರಿ ವಸ್ತು ಕೊಡಿಸುವುದಾಗಿ ನಂಬಿಸಿ ದರೋಡೆ

Published on

ಮೈಸೂರು: ಗುಜರಿ ವಸ್ತು ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ವ್ಯಕ್ತಿಯನ್ನು ಮೈಸೂರಿಗೆ ಕರೆಸಿಕೊಂಡು ಅಪಹರಿಸಿದ ನಾಲ್ವರ ತಂಡ ಚಾಕು ತೋರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

ಬೆಂಗಳೂರು ಜಯನಗರದ ಅಬ್ದುಲ್ ಅಸ್ಸಿಫ್ ಸುಲಿಗೆಗೆ ಒಳಗಾಗಿ ಹಣ ಕಳೆದುಕೊಂಡಿದ್ದು, ಮೈಸೂರಿನ ಅಪ್ಸರ್ ಖಾನ್ ಹಾಗೂ ಇತರ ಮೂವರು ಕೃತ್ಯವೆಸಗಿದ್ದಾರೆ ಎಂದು ನರಸಿಂಹರಾಜ (ಎನ್.ಆರ್.) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಜರಿ ವ್ಯಾಪಾರ ಮಾಡುತ್ತಿದ್ದ ಅಬ್ದುಲ್ ಅಸ್ಸಿಫ್ ಮೂರು ವರ್ಷದಿಂದ ತಾಮ್ರ, ಹಿತ್ತಾಳೆ ಸೇರಿದಂತೆ ಇನ್ನಿತರ ಗುಜರಿ ವಸ್ತುಗಳನ್ನು ಖರೀದಿಸಿ ಅವುಗಳನ್ನು ಕರಗಿಸಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಅಪ್ಸರ್‌ಖಾನ್ ಆಗಾಗ್ಗೆ ಗುಜರಿ ವಸ್ತುಗಳನ್ನು ಕೊಡಿಸುವ ಮೂಲಕ ಅಸ್ಸಿಫ್ ಅವರ ವಿಶ್ವಾಸ ಗಳಿಸಿದ್ದ.

ಆ.2ರಂದು 800 ಕೆ.ಜಿ.ಯಷ್ಟು ಗುಜರಿ ವಸ್ತುಗಳು ಇದ್ದು, ಕೆ.ಜಿಗೆ 1500 ಆಗುತ್ತದೆ. ಒಟ್ಟು 10 ಲಕ್ಷ ರೂ. ತೆಗೆದುಕೊಂಡು ಬರುವಂತೆ ಅಪ್ಸರ್ ಖಾನ್ ಮೊಬೈಲ್ ಮೂಲಕ ಅಬ್ದುಲ್ ಅಸಿಫ್ ಅವರಿಗೆ ಮೊಬೈಲ್ ಕರೆ ಮಾಡಿ ಹೇಳಿದ್ದನೆನ್ನಲಾಗಿದೆ. ಅದರಂತೆ ಅಬ್ದುಲ್ ಅಸ್ಸಿಫ್, ತನ್ನ ಸಂಬಂಧಿ ಮೊಕ್ತಿಯಾರ್ ಪಾಷಾ ಜತೆ ಓಮಿನಿ ವಾಹನದಲ್ಲಿ ಆ.3ರಂದು ಸಂಜೆ ಮೈಸೂರಿಗೆ ಬಂದಿದ್ದರು.

ಬೆಂಗಳೂರು-ಮೈಸೂರು ರಿಂಗ್ ರಸ್ತೆಯಲ್ಲಿ ವಾಹನ ಹತ್ತಿಕೊಂಡ ಅಪ್ಸರ್ ಖಾನ್, ಕೆ.ಆರ್.ಎಸ್ ರಸ್ತೆಯಲ್ಲಿ ಹೋಗುವಂತೆ ಹೇಳಿದ್ದಾನೆ. ಸ್ವಲ್ಪ ದೂರ ತೆರಳಿದ ಬಳಿಕ ಮೊಕ್ತಿಯಾರ್ ಪಾಷಾನನ್ನು ಇಳಿಸಿದರೆನ್ನಲಾಗಿದೆ. ಮುಂದೆ ಹೋದಾಗ ಅಪ್ಸರ್ ಖಾನ್ ಕಡೆಯ ಮೂವರು ವ್ಯಾನ್ ಹತ್ತಿಕೊಂಡು ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣದ ಬ್ಯಾಗ್ ಕಿತ್ತುಕೊಂಡು ಕಾಮನಕೆರೆಹುಂಡಿಗೆ ಹೋಗುವ ಮಾರ್ಗದಲ್ಲಿ ವಾಹನ ನಿಲ್ಲಿಸಿ ಕೀ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಲೆಮರೆಸಿಕೊಂಡಿರುವ ಅಪ್ಸರ್ ಖಾನ್ ಹಾಗೂ ತಂಡದ ಪತ್ತೆ ಕಾರ್ಯ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net