

ಕುಂದಾಪುರ: ತಾಲೂಕಿನ ಕೊರ್ಗಿ-ಹೆಸ್ಕುತ್ತೂರು ತಿರುವಿನ ಬಳಿ ಶುಕ್ರವಾರ ಸಾಯಂಕಾಲ ಶಾಲಾ ವಾಹನದಲ್ಲಿ ಬರುತ್ತಿರುವ ಮಗುವಿಗೆ ರಸ್ತೆ ಬದಿ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತನೊಬ್ಬ ಮಾರಕಾಯುಧದಿಂದ ಗಂಭೀರ ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣ ಎಗರಿಸಿದ್ದಾನೆ.
ಕೊರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿನಬೆಟ್ಟು ದೇವಕಿ(32) ಎಂಬುವರು ತೆಕ್ಕಟ್ಟೆ- ದಬ್ಬೆಕಟ್ಟೆ ಮುಖ್ಯ ರಸ್ತೆ ಸಮೀಪ ಶಾಲಾ ವಾಹನದಲ್ಲಿ ಬರುವ ತನ್ನ ಮಗುವಿಗಾಗಿ ಕಾಯುತ್ತಿದ್ದರು. ಈ ಸಂದರ್ಭ ಅಪರಿಚಿತನೊಬ್ಬ ಆಗಮಿಸಿ ಅವರ ಮೇಲೆ ಮನಸ್ಸೋ ಇಚ್ಛೆ ಮಾರಕಾಯುಧದಿಂದ ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣಗಳನ್ನು ಎರಗಿಸಿ ಪರಾರಿಯಾಗಿದ್ದಾನೆ. ಮಾರಣಾಂತಿಕ ಹಲ್ಲೆ ಪರಿಣಾಮ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಗೂ ಮೊದಲು ಬೈಕೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಮಹಿಳೆ ನಿಂತಿದ್ದು ನೋಡಿದ ಆತ ಬೈಕನ್ನು ದೂರದಲ್ಲಿ ನಿಲ್ಲಿಸಿ ಬಂದು ಈ ಕೃತ್ಯ ನಡೆಸಿ ಬಳಿಕ ನಿರ್ಜನ ಕಾಡುದಾರಿಯಲ್ಲಿ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುಕುಕುಗೊಳಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.