

ಬೆಳ್ತಂಗಡಿ: ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ನ.13ರಂದು ಮನೆ ದರೋಡೆ ಯತ್ನ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಮನೆ ದರೋಡೆ ಮಾಡುವ ಸಂಚು ರೂಪಿಸಿ ಸಾಕುನಾಯಿಯನ್ನು ಹತ್ಯೆಗೈದು ದರೋಡೆ ಯತ್ನ ವಿಫಲವಾಗಿ ಪರಾರಿಯಾಗಿದ್ದರು. ಈ ಬಗ್ಗೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಮತ್ತು ಧರ್ಮಸ್ಥಳ ಠಾಣಾ ಎಸ್‌ಐ ಪವನ್ ನಾಯಕ್ ತಂಡ ಆರೋಪಿಗಳಾದ ಬಂಟ್ವಾಳ ಮೇಲ್ಕಾರ್ ನಿವಾಸಿ ಪಿ.ಇರ್ಫಾನ್(28), ಅರ್ಕುಳ ವಳಚ್ಚಿಲ್ ನಿವಾಸಿ ಮಹಮ್ಮದ್ ತೌಸೀಫ್(26)ನನ್ನು ಬಂಧಿಸಿದ್ದಾರೆ. ಇವರ ಮಾಹಿತಿಯಂತೆ ಇತರ ಆರೋಪಿಗಳಾದ ಬೆಳ್ತಂಗಡಿ ಬೆಳಾಲು ಗ್ರಾಮದ ಪರಾಳ ನಿವಾಸಿ ಚಿದಾನಂದ ಗೌಡ(25), ಬೆಳ್ತಂಗಡಿ ಕಲ್ಮಂಜ ಗ್ರಾಮದ ಕಂದೂರು ನಿವಾಸಿ ಮೋಹನ್(32) ಎಂಬುವರನ್ನು ಬಂಧಿಸಿ ವಿಚಾರಿಸಿದ್ದು, ದರೋಡೆ ಯತ್ನವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಂಧಿತರಿಂದ ಎರಡು ಕಾರು, ತಲ್ವಾರು, ಕಬ್ಬಿಣದ ರಾಡ್, ನಾಲ್ಕು ಮೊಬೈಲ್ ಸೇರಿ 8 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಉಪಅಧೀಕ್ಷಕ ವೆಲೆಂಟೈನ್ ಡಿಸೋಜ ನಿರ್ದೇಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ., ಧರ್ಮಸ್ಥಳ ಠಾಣಾ ಎಸ್‌ಐ ಪವನ್ ನಾಯಕ್, ಸಿಬ್ಬಂದಿ ಥೋಮಸ್ ಇ.ಜಿ., ಬೆನ್ನಿಚ್ಚನ್, ವಿಶ್ವನಾಥ್ ನಾಯ್ಕ, ವಿಜು ಎಂ.ಜಿ., ರಾಜೇಶ್ ಎನ್., ಪ್ರವೀಣ್, ಇಬ್ರಾಹಿಂ ಗರ್ಡಾಡಿ, ಅಬ್ದುಲ್ ಲತೀಫ್, ಪ್ರಮೋದ್ ನಾಯ್ಕ, ಮಹಮ್ಮದ್ ಅಸ್ಲಾಂ, ರಾಹುಲ್ ಹಾಗೂ ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಭಾಗವಹಿಸಿದ್ದಾರೆ.