ಕಳವು, ತಲವಾರ್ ಹಿಡಿದು ರೀಲ್ಸ್ ಮಾಡುತ್ತಿದ್ದವರ ಬಂಧನ

h14-arrest
Published on

ಹುಬ್ಬಳ್ಳಿ: ನಗರದ ವಿವಿಧೆಡೆ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳ ಕಳವು ಹಾಗೂ ಕೈಯಲ್ಲಿ ತಲವಾರ್ ಹಿಡಿದು ರೀಲ್ಸ್ ಮಾಡುತ್ತಿದ್ದ ಆರೋಪದಡಿ ಒಂದೇ ಕುಟುಂಬದ ನಾಲ್ವರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋಪಾಲ ವಾಲ್ಮೀಕಿ, ಹನುಮಂತ ಮಣ್ಣವಡ್ಡರ, ಆರೀಫ್ ವಾಲ್ಮೀಕಿ, ಲಿಯಾಖತ್ ಸೈಯದ್‌ಸಾಬ್ ಮಡಗಾವಿ ಬಂಧಿತರು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 20 ಗ್ರಾಂ ಚಿನ್ನದ ಸರ, 9 ದ್ವಿಚಕ್ರವಾಹನ ಸೇರಿ ಒಟ್ಟು 6 ಲಕ್ಷ ರೂ. ಮೌಲ್ಯದ ಸ್ವತ್ತು ಹಾಗೂ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.

ಕಳವು ಮುಗಿದಾದ ಮೇಲೆ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್ ಮಾಡುವ ಶೋಕಿಯೂ ಇವರಿಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ಆನಂದನಗರದ ಸಮೀಪದ ಮಸೀದಿ ಬಳಿ ಇಬ್ಬರು ತಲಾವಾರ್ ಹಿಡಿದು ರೀಲ್ಸ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಭಾರತೀಯ ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ದಕ್ಷಿಣ ಎಸಿಪಿ ಉಮೇಶ ಚಿಕ್ಕಮಠ ಮಾರ್ಗದರ್ಶನದಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಸಿಂಧೂರ, ಪಿಎಸ್‌ಐಗಳಾದ ಬಿ.ಎನ್. ಸಾತಣ್ಣವರ, ವಿಶ್ವನಾಥ ಆಲಮಟ್ಟಿ, ಸಿಬ್ಬಂದಿ ಪಿ.ಬಿ. ಕಾಳೆ, ನಾಗರಾಜ ಕೆಂಚಣ್ಣನವರ, ಕೃಷ್ಣ ಮೋಟೆಬೆನ್ನೂರ, ಅಭಯ ಕಟ್ನಳ್ಳಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net