ಚಿನ್ನಾಭರಣ, ನಗದು ದೋಚಿದ ಖದೀಮರು

ಚಿನ್ನಾಭರಣ, ನಗದು ದೋಚಿದ ಖದೀಮರು
Published on

ಹಾಸನ: ನಗರದ ಸದಾಶಿವ ನಗರದ ಮನೆಯೊಂದರಲ್ಲಿ ಅಂದಾಜು ಒಂದು ಕೆಜಿ ಚಿನ್ನ, 15 ಲಕ್ಷ ರೂ. ಹೆಚ್ಚು ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆಂದು ಬ್ಯಾಂಕ್ ಲಾಕರ್‌ನಿಂದ ಬೆಲೆ ಬಾಳುವ ಚಿನ್ನ-ಬೆಳ್ಳಿ ಆಭರಣಗಳನ್ನು ಮನೆಗೆ ತರಲಾಗಿತ್ತು. ಗುರುವಾರ ರಾತ್ರಿ ಮನೆಗೆ ಬೀಗ ಹಾಕಿ ಇಡೀ ಕುಟುಂಬ ಹೊರಹೋಗಿತ್ತು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಪತ್ನಿಯ ತಾಯಿ ಮನೆಯಲ್ಲೇ ನವೀನ್ ಕುಟುಂಬ ವಾಸವಾಗಿತ್ತು. ತಾವು ವಾಸವಿದ್ದ ಮನೆಯ ಎದುರಿನಲ್ಲೇ ನವೀನ್ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಹೊಸ ಮನೆಯ ಕಾಮಗಾರಿಗೆ ಹಣವನ್ನು ಮನೆಯಲ್ಲಿ ಇಟ್ಟಿದ್ದರು. ಸ್ಥಳಕ್ಕೆ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಖದೀಮರ ಪತ್ತೆಗೆ ಎಸ್ಪಿ ಮೊಹಮದ್ ಸುಜೀತಾ ವಿಶೇಷ ತನಿಖಾ ತಂಡ ರಚನೆ ಮಾಡಿದ್ದು, ಆರೋಪಿಗಳ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net